ಸೋಮವಾರಪೇಟೆ, ಜೂ. ೨೭: ಕೊರೊನಾ ವೈರಸ್ ಹಿನ್ನೆಲೆ ಮುಚ್ಚಿದ್ದ ಶಾಲೆಗಳು ಮುಂದಿನ ಒಂದೆರೆಡು ತಿಂಗಳುಗಳಲ್ಲಿ ಆರಂಭಗೊಳ್ಳುವ ಆಶಯದಲ್ಲಿರುವ ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಶಾಲೆಗಳಲ್ಲಿ ಸ್ವಚ್ಛತಾಕಾರ್ಯ ನಡೆಸುತ್ತಿದ್ದಾರೆ.
ಮಕ್ಕಳೂ ಕೂಡ ಶಾಲೆಗಳಿಗೆ ಮರಳಲು ಉತ್ಸುಕರಾಗಿದ್ದು, ಇಂತಹ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ರೂಪ ನೀಡಿ ಮಕ್ಕಳನ್ನು ಸ್ವಾಗತಿಸಲು ಸಮಿತಿಗಳು ಸಜ್ಜಾಗುತ್ತಿವೆ. ಅದೇ ರೀತಿ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳು ಬಣ್ಣ ಕಾಣುತ್ತಿವೆ.
ಶಾಲಾ ಪ್ರಾರಂಭವಾದ ನಂತರ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ನೀಡುವ ಸಲುವಾಗಿ ಹಳೆ ವಿದ್ಯಾರ್ಥಿಗಳು ಎರಡು ಕಂಪ್ಯೂಟರ್ ನೀಡಲು ಮನಸ್ಸು ಮಾಡಿದ್ದಾರೆ. ಕಾಜೂರು ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ಸ್ಟೇಟ್ ಬ್ಯಾಂಕ್ ಮೈಸೂರಿನ ಸಹಾಯಕ ಮುಖ್ಯ ವ್ಯವಸ್ಥಾಪಕ ವಿ.ಕೆ. ಶ್ರೀಜಿತ್ ಮತ್ತು ಕಾರ್ಯದರ್ಶಿಯಾಗಿ ಹಿರಿಯ ನೋಟರಿ ಕೆ.ಎಸ್. ಪದ್ಮನಾಭ ಕೆಲಸ ನಿರ್ವಹಿಸುತ್ತಿದ್ದಾರೆ.