ಗುಡ್ಡೆಹೊಸೂರು, ಜೂ. ೨೭: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯದ ನಾಲಾವ್ಯಾಪ್ತಿಯ ಎಡದಂಡೆ ೧೧ ಕಿ.ಮೀ ಮತ್ತು ಬಲದಂಡೆಯ ೨೯ ಕಿ.ಮೀ ವ್ಯಾಪ್ತಿಯ ನಾಲೆಯು ಸಂಪೂರ್ಣ ಕಾಡುಬೆಳೆದು ಅರಣ್ಯ ಪ್ರದೇಶದಂತಾಗಿದೆ. ಎಡದಂಡೆ ನಾಲೆಯ ವ್ಯಾಪ್ತಿಯ ಗ್ರಾಮಗಳಾದ ರಂಗಸಮುದ್ರ, ಹೊಸಪಟ್ಟಣ, ನಂಜರಾಯಪಟ್ಟಣ, ವಿರುಪಾಕ್ಷಪುರ ಗ್ರಾಮಗಳ ರೈತರು ಈ ಜಲಾಶಯದ ನೀರನ್ನೇ ನಂಬಿ ಭತ್ತದ ಕೃಷಿ ನಡೆಸುತ್ತಾರೆ. ಅದರಂತೆ ಬಲದಂಡೆ ನಾಲಾವ್ಯಾಪ್ತಿಯ ಕಬ್ಬಿನಗದ್ದೆ, ರಸಲ್‌ಪುರ, ಬಾಳುಗೋಡು, ಬೆಟ್ಟಗೇರಿ, ಬಸವನಹಳ್ಳಿ ಭಾಗದ ರೈತರು ಮಳೆಗಾಲದಲ್ಲಿ ಭತ್ತ ಕೃಷಿಗೆ ಈ ಜಲಾಶಯದ ನೀರನ್ನೇ ಅವಲಂಬಿಸಿದ್ದಾರೆ. ಪ್ರತಿವರ್ಷ ಬೇಸಿಗೆಯಲ್ಲಿ ನಾಲೆಯೊಳಗಿನ ಕಾಡು ಕಡಿದು ಹೂಳೆತ್ತುವ ಕಾರ್ಯ ನಡೆಸಬೇಕು. ಆದರೆ ನೀರಾವರಿ ಇಲಾಖೆಗೆ ಈ ಬಗ್ಗೆ ಕಾಳಜಿಯೇ ಇರುವಂತಿಲ್ಲ.

ಜಲಾಶಯ ಭರ್ತಿಯಾಗಿ ನೀರು ಕಾವೇರಿ ನದಿ ಸೇರಿದರೆ, ರೈತರ ಜಮೀನಿಗೆ ನೀರಿಲ್ಲ. ಸರಕಾರ ಮತ್ತು ಜಿಲ್ಲಾಡಳಿತ ಇದರ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಈ ವ್ಯಾಪ್ತಿಯ ರೈತರ ಒತ್ತಾಯವಾಗಿದೆ. ಕೃಷಿ ನಡೆಸಲು ಸರಿಯಾದ ಸಮಯಕ್ಕೆ ನೀರು ನೀಡದಿದ್ದರೂ ಕಂದಾಯ ಇಲಾಖೆಯ ವತಿಯಿಂದ ನೀರಿನ ಕಂದಾಯ ವಸೂಲಾತಿಯಾಗುತ್ತೆ.

ಚಿಕ್ಲಿಹೊಳೆ ನಾಲೆಯ ದುರಸ್ತಿ ಕಾರ್ಯ ನಡೆಸಿ ರೈತರು ಭತ್ತ ನಾಟಿಕಾರ್ಯ ಮಾಡಲು ಇಲಾಖೆಯ ವತಿಯಿಂದ ಕಾಮಗಾರಿಯನ್ನು ತಕ್ಷಣದಿಂದಲೆ ಪ್ರಾರಂಭಿಸುವAತೆ ಚಿಕ್ಲಿಹೊಳೆ ನಾಲಾ ವ್ಯಾಪ್ತಿಯ ರೈತರು ಒತ್ತಾಯಿಸಿದ್ದಾರೆ.

-ಕುಡೆಕ್ಕಲ್ ಗಣೇಶ್.