ಕಣಿವೆ, ಜೂ. ೨೬ : ಕಳೆದ ಹದಿನೈದು ದಿನಗಳ ಹಿಂದೆ ಅಲ್ಪಾವಧಿ ಬೆಳೆಯಾದ ಮುಸುಕಿನ ಜೋಳದ ಬಿತ್ತನೆ ಮಾಡಿದ ಕುಶಾಲನಗರ ಹಾಗೂ ಹಾರನಹಳ್ಳಿ ಹೋಬಳಿಯ ಅನೇಕ ಕೃಷಿಕರು ಮಳೆಯ ನಿರೀಕ್ಷೆಯಲ್ಲಿ ದಿನಕಳೆಯುತ್ತಿದ್ದಾರೆ.

ಈಗಾಗಲೇ ಭೂಮಿಯಿಂದ ಮೊಳಕೆಯೊಡೆದು ಮೇಲೆ ಬಂದಿರುವ ಜೋಳದ ಗಿಡದೊಳಗಿನ ಕಳೆ ನಿವಾರಣೆಗೆ ಹರತೆ ಹೊಡೆದು ಮೊದಲ ಹಂತದ ರಸ ಗೊಬ್ಬರ ಅಳವಡಿಸಿರುವ ಕೃಷಿಕರು ಮಳೆಗಾಗಿ ಮೋಡಗಳನ್ನು ನೋಡುತ್ತಿದ್ದಾರೆ. ಅದ್ಯಾಕೋ ಏನೋ ಕಳೆದ ಎಂಟು ದಿನಗಳಿಂದ ಮಳೆಯೇ ಬಿದ್ದಿಲ್ಲ. ಹಾಗಾಗಿ ಇದೀಗ ಮಳೆ ಜೋಳದ ಕೃಷಿಕರಿಗೆ ಅತ್ಯಗತ್ಯವಾಗಿ ಬೇಕಾಗಿದೆ.

ನೀರಾವರಿ ಸೌಕರ್ಯವಿರುವ ಕೃಷಿಕರು ಕಾವೇರಿ ನದಿಯಲ್ಲಿ ಸಮೃದ್ಧವಾಗಿ ಹರಿಯುತ್ತಿರುವ ನೀರನ್ನು ಯಂತ್ರಗಳ ಮೂಲಕ ತಮ್ಮ ಜೋಳದ ಹೊಲ ಗದ್ದೆಗಳಿಗೆ ಹಾಯಿಸಿಕೊಂಡಿದ್ದಾರೆ. ಅರೆ ನೀರಾವರಿ ಪ್ರದೇಶದ ಚಿಕ್ಕತ್ತೂರು, ದೊಡ್ಡತ್ತೂರು, ಆರನೇ ಹೊಸಕೋಟೆ, ಚಿನ್ನೇನಹಳ್ಳಿ, ಸಿದ್ದಲಿಂಗಪುರ, ಹಾರನಹಳ್ಳಿ ಹೋಬಳಿಯ ಬೈಲಕೊಪ್ಪ, ಮರಡಿಯೂರು, ಚನ್ನಕಲ್ ಕಾವಲ್, ಲಕ್ಷಿö್ಮಪುರ ಮೊದಲಾದ ಪ್ರದೇಶಗಳ ಕೃಷಿಕರು ವರುಣನಿಗಾಗಿ ಕಾಯುತ್ತಿದ್ದಾರೆ.

ಮಳೆಯ ನಿರೀಕ್ಷೆಯಲ್ಲಿ ಕಳೆದ ಜೂನ್ ತಿಂಗಳ ಮೊದಲ ವಾರದಲ್ಲಿ ಜೋಳ ಬಿತ್ತನೆ ಮಾಡಿದ ಅರೆ ನೀರಾವರಿ ಪ್ರದೇಶಗಳ ಕೆಲವು ಕೃಷಿಕರು ಮಳೆ ಸಕಾಲಿಕವಾಗಿ ಬಾರದ್ದರಿಂದ ಬಿತ್ತಿದ ಜೋಳ ಮೊಳಕೆಯೊಡೆಯದ ಕಾರಣ ಮತ್ತೊಮ್ಮೆ ಭೂಮಿಯನ್ನು ಉಳುಮೆ ಮಾಡಿ ಎರಡನೇ ಬಾರಿ ಜೋಳದ ಬಿತ್ತನೆ ಮಾಡಿದ್ದರು. ಹಾಗಾಗಿ ಈ ಬಾರಿ ವರುಣ ದೇವ ಕೃಪೆ ಮಾಡಿ ಮಳೆ ಸುರಿಸುವ ಮೂಲಕ ಕೃಷಿಕರ ಮೊಗದಲ್ಲಿ ಖುಷಿ ತುಂಬಬೇಕಿದೆ.