ಸಿದ್ದಾಪುರ, ಜೂ. ೨೬: ಕಾಡಿಗೆ ತೆರಳದ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆಯನ್ನು ನಡೆಸುತ್ತಿವೆ. ಅಲ್ಲದೇ ಕೃಷಿ ಫಲಸುಗಳನ್ನು ಹಾನಿಗೊಳಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇತ್ತೀಚೆಗೆ ನೆಲ್ಲಿಹುದಿಕೇರಿ, ಅಭ್ಯತ್ಮಂಗಲ, ವಾಲ್ನೂರು ತ್ಯಾಗತ್ತೂರು ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಸೇರಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನೇ ಬೆನ್ನಟ್ಟಿದ್ದ ಘಟನೆ ನಡೆದಿತ್ತು. ಇದಲ್ಲದೇ ಈ ಭಾಗದಲ್ಲಿ ಇರುವ ೨೦ಕ್ಕೂ ಅಧಿಕ ಕಾಡಾನೆಗಳು ಬೇರ್ಪಟ್ಟು ಕೆಲವು ಕಾಡಾನೆಗಳು ತಮ್ಮ ಮರಿಯಾನೆಗಳೊಂದಿಗೆ ತೋಟಗಳಲ್ಲಿ ಬೀಡುಬಿಟ್ಟು ತೋಟ ಬಿಟ್ಟು ಕದಲುತ್ತಿಲ್ಲ. ಇಂತಹ ಕಾಡಾನೆಗಳು ಇದೀಗ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿವೆ.
ನೆಲ್ಲಿಹುದಿಕೇರಿಯ ಶಾಲೆ ರಸ್ತೆಯ ನಿವಾಸಿಯಾಗಿರುವ ಟಿ.ಟಿ. ಉದಯಕುಮಾರ್ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿದ್ದ ಅಡಿಕೆ ಹಾಗೂ ಕಾಫಿ ಗಿಡಗಳನ್ನು ಎಳೆದು ಹಾಕಿ ಧ್ವಂಸಗೊಳಿಸಿರುತ್ತವೆ. ಮೂರು ಕಾಡಾನೆಗಳು ರಾತ್ರಿ ಸಮಯದಲ್ಲಿ ಅಡಿಕೆ ತೋಟಕ್ಕೆ ಲಗ್ಗೆ ಇಟ್ಟು ದಾಂಧಲೆ ನಡೆಸಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ ಎಂದು ಉದಯಕುಮಾರ್ ತಿಳಿಸಿದರು. ಕಾಡಾನೆಗಳ ಹಾವಳಿಯಿಂದಾಗಿ ಕೃಷಿಕರಿಗೆ ಸಮಸ್ಯೆಯಾಗಿದೆ ಎಂದು ಅವರು ಅಳಲು ತೋಡಿಕೊಂಡರು. -ವಾಸು