ಮಡಿಕೇರಿ, ಜೂ. ೨೫: ಗೋಹತ್ಯೆ ಹಾಗೂ ಗೋಮಾಂಸ ಮಾರಾಟ ಜಾಲವನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕೆಂದು ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರಿಗೆ ಮನವಿ ಸಲ್ಲಿಸಲಾಯಿತು.

ಕೊಡಗು ಜಿಲ್ಲೆಯಲ್ಲಿ ಗೋಹತ್ಯೆ ಪ್ರಕರಣ ಹೆಚ್ಚಾಗಿ ನಡೆಯುತ್ತಿದೆ. ಕಳೆದೆರಡು ವಾರದಲ್ಲಿ ಸಂಘಟನೆ ೫ ಪ್ರಕರಣವನ್ನು ಬೆಳಕಿಗೆ ತಂದಿದೆ. ಅದಲ್ಲದೆ ಹಲವು ಗೋಕಳ್ಳತನ ಪ್ರಕರಣ ಪತ್ತೆಯಾಗಬೇಕಾಗಿದೆ. ಗೋವುಗಳಿಗೆ ಸಮರ್ಪಕವಾಗಿ ಮೇವಿನ ವ್ಯವಸ್ಥೆ ಇಲ್ಲದ ಕಾರಣ ಬಯಲು ಪ್ರದೇಶದಲ್ಲಿ ಮೇಯಲು ಬಿಟ್ಟ ಸಂದರ್ಭದಲ್ಲಿ ದುಷ್ಕೃತ್ಯ ಸಂಭವಿಸುತ್ತಿದೆ. ಬಳಿಕ ವ್ಯವಸ್ಥಿತ ರೀತಿಯಲ್ಲಿ ಗೋಮಾಂಸ ಮಾಡಿ ಮಾರಾಟ ಮಾಡಲಾಗುತ್ತಿದೆ. ಅದಲ್ಲದೆ ತರಕಾರಿ-ದಿನಸಿ ಸಾಗಾಟ ನೆಪದಲ್ಲಿ ಹೊರಜಿಲ್ಲೆಗಳಿಂದ ಗೋಮಾಂಸ ತರುತ್ತಿದ್ದಾರೆ ಎಂದು ಆರೋಪಿಸಿದರು. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಮನವಿ ಮೂಲಕ ಸಂಘಟನೆ ಮೂಲಕ ಪ್ರಮುಖರು ಒತ್ತಾಯಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆಯ ಪ್ರಾಂತ ಕಾರ್ಯದರ್ಶಿ ಕೆ.ಟಿ. ಉಲ್ಲಾಸ್, ನಿರಂತರವಾಗಿ ಗೋಹತ್ಯೆ ಪ್ರಕರಣ ಸಂಭವಿಸುತ್ತಿದೆ. ಇದೇ ರೀತಿ ಪ್ರಕರಣ ಮುಂದುವರೆದರೆ ಗೋಪಾಲಕರು, ಗೋಪ್ರೇಮಿಗಳು ತಮ್ಮ ಸ್ವಾಭಿಮಾನ, ಜಾನುವಾರು ಮತ್ತು ಗೋಪಾಲಕರ ಆತ್ಮರಕ್ಷಣೆಗಾಗಿ ಬಂದೂಕು ಎತ್ತಬೇಕಾದ ಪರಿಸ್ಥಿತಿ ಎದುರಾಗಬಹುದು. ಆ ರೀತಿಯಾದಲ್ಲಿ ಅದಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೇರಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಜಿ. ಅಯ್ಯಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್, ಜಿಲ್ಲಾ ಪ್ರಚಾರ ಪ್ರಮುಖ್ ಕುಮಾರ್, ಜಿಲ್ಲಾ ಸಂಯೋಜಕ ಮಾತೃ ಸುರಕ್ಷ ತಿಮ್ಮಯ್ಯ, ಮೈಸೂರು ವಿಭಾಗ ಪ್ರಧಾನ ಕಾರ್ಯದರ್ಶಿ, ಜೀವನ್ ಸೇರಿದಂತೆ ಇನ್ನಿತರರು ಹಾಜರಿದ್ದರು.