*ವೀರಾಜಪೇಟೆ, ಜೂ. ೨೫: ಕೂಲಿ ಕೆಲಸ ಮಾಡಲೆಂದು ಕೊಡಗಿನ ಕಾಫಿ ತೋಟಕ್ಕೆ ಬಂದಿದ್ದ ನಾಗರಹೊಳೆ ಸಮೀಪದ ಗ್ರಾಮವಾದ ಬಿಲ್ಲೇನಹೊಸಹಳ್ಳಿ ಗ್ರಾಮದ ಕೂಲಿ ಕಾರ್ಮಿಕನ ಮೇಲೆ ತೋಟದ ಲೈನ್ಮನೆಯಲ್ಲಿ ಸಹಕಾರ್ಮಿಕನಿಂದ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಅವರು ಹತ್ತು ದಿನಗಳ ನಂತರ ಮೃತಪಟ್ಟಿದ್ದಾರೆ.
ಬಿಲ್ಲೇನಹೊಸಹಳ್ಳಿ ಗ್ರಾಮದ ಶಂಕರಶೆಟ್ಟಿ ಶಿವು ಅಲಿಯಾಸ್ ಜಲೇಂದ್ರ (೨೪) ಮೃತ ವ್ಯಕ್ತಿ ಇವರು ಅವಿವಾಹಿತನಾಗಿದ್ದು ಕೂಲಿ ಕೆಲಸಕ್ಕೆಂದು ತಾಲೂಕಿನ ಕೊಳತ್ತೋಡಿನ ರಾಜೇಶ್ ಎಂಬವರ ತೋಟದಲ್ಲಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಪಿರಿಯಾಪಟ್ಟಣ ತಾಲೂಕಿನ ಉತ್ತೇನಹಳ್ಳಿ ಹಾಡಿಯ ಬಸಪ್ಪ ಸಹ ಇದೇ ತೋಟದಲ್ಲಿ ಕೆಲಸಕ್ಕೆ ಸೇರಿದ್ದು, ಜೂನ್ ೧೪ ರಂದು ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಬಸಪ್ಪ ಕತ್ತಿಯಿಂದ ಶಿವು ಮೇಲೆ ಹ೧ಲ್ಲೆ ನಡೆಸಿದ್ದು ತೀವ್ರವಾಗಿ ಗಾಯಗೊಂಡಿದ್ದ ಶಿವುನನ್ನು ತೋಟದ ಮಾಲೀಕರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದರು.
ಬುಧವಾರದಂದು ಇವರನ್ನು ಮರಳಿ ಬಿಲ್ಲೇನಹೊಸಹಳ್ಳಿಗೆ ಕರೆ ತರಲಾಗಿತ್ತು. ಕೋಮಾ ಸ್ಥಿತಿಗೆ ತಲುಪಿ ಅಸ್ವಸ್ಥಗೊಂಡಿದ್ದ ಶಿವುವನ್ನು ಪುನಃ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಈ ಸಂಬAಧ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಮೊದಲು ಐಪಿಸಿ ಸೆಕ್ಷನ್ ೩೦೭ರಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸೆಕ್ಷನ್ ಐಪಿಸಿ ಸೆಕ್ಷನ್ ೩೦೨ ರಡಿಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ಹುಣಸೂರು ತಾಲೂಕು ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆಗೆ ಅಲ್ಲಿನ ವೈದ್ಯಾಧಿಕಾರಿಗಳು ಅನುಮತಿ ನೀಡದ ಮೇರೆಗೆ ಇಂದು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ವೀರಾಜಪೇಟೆ ಪೊಲೀಸರು ಶವ ಪರೀಕ್ಷೆಗೆ ತೆಗೆದು ಕೊಂಡು ಬಂದರು. ಸರ್ಕಾರಿ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆರೋಪಿಗಾಗಿ ಗ್ರಾಮಾಂತರ ಪೊಲೀಸರು ಶೋಧ ನಡೆಸುತ್ತಿದ್ದಾರೆ.