ನಾಪೋಕ್ಲು, ಜೂ. ೨೫: ಮಡಿಕೇರಿ-ನಾಪೋಕ್ಲು ಮುಖ್ಯರಸ್ತೆ ತೋಟಗಾರಿಕಾ ಇಲಾಖೆಯ ಫಾರಂ ಬಳಿಯಿಂದ ಬೇತು ಗ್ರಾಮದ ಮೂಲಕ ವೀರಾಜಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಚಾಲಕರು ಹಾಗೂ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ. ರಸ್ತೆಯ ಹಲವೆಡೆ ದೊಡ್ಡ ದೊಡ್ಡ ಗುಂಡಿಗಳಾಗಿದ್ದು ಆ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊAಡು ಕೆಸರಿನ ಹೊಂಡದಲ್ಲೇ ವಾಹನಗಳು ಸಂಚರಿಸುವ ಜನರು ನಡೆದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಗುಂಡಿಗಳಿAದ ನೀರು ಹೊರಹೋಗಲು ಚರಂಡಿ ವ್ಯವಸ್ಥೆಯೇ ಇಲ್ಲ. ಸುಮಾರು ೩೫ ವರ್ಷಗಳ ಹಿಂದೆ ಡಾಮರು ರಸ್ತೆಯಾಗಿದ್ದ ಇದು ಇದೀಗ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿದೆ. ಈ ಹಿಂದೆ ನಾಪೋಕ್ಲು ಗ್ರಾಮಪಂಚಾಯಿತಿ ವತಿಯಿಂದ ಹೊಸ ರಸ್ತೆ ನಿರ್ಮಾಣ ಮಾಡಲು ಯಂತ್ರಗಳನ್ನು ತಂದು ಮಣ್ಣು ಅಗೆದು ಹಾಕಲಾಗಿದೆ. ಆದರೆ ಯಾವ ಪ್ರಗತಿಯು ಕಂಡಿಲ್ಲ. ಜಿಲ್ಲಾ ಪಂಚಾಯಿತಿ ವತಿಯಿಂದ ರಸ್ತೆ ನಿರ್ಮಿಸಿದ್ದರೆ ಪಟ್ಟಣಕ್ಕೊಂದು ಪರ್ಯಾಯ ರಸ್ತೆ ಆಗುತ್ತಿತ್ತು. ಮೂರ್ನಾಡು ಬೆಟ್ಟಗೇರಿ ಭಾಗದಿಂದ ಇಲ್ಲಿನ ಮಕ್ಕಿಶಾಸ್ತಾವು ದೇವಾಲಯಕ್ಕೆ ಬರುವ ಭಕ್ತರಿಗೂ ಅನುಕೂಲಕರವಾಗುತ್ತಿತ್ತು. ರಸ್ತೆ ಬದಿಯ ಮಣ್ಣು ಕೆಸರು ಮಯವಾಗಿದೆ. ರಸ್ತೆ ದುರಸ್ತಿಗೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಈ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

- ದುಗ್ಗಳ ಸದಾನಂದ