ಕಣಿವೆ, ಜೂ. ೨೫: ಅನ್ನದಾತರ ಆಸರೆಗೆಂದು ಕಳೆದ ಮೂರು ದಶಕಗಳ ಹಿಂದೆ ಕೊಡಗಿನ ರಂಗಸಮುದ್ರದ ಬಳಿ ನಿರ್ಮಿಸಿದ ಚಿಕ್ಲಿಹೊಳೆ ನೀರಾವರಿ ಯೋಜನೆ ಜಿಲ್ಲೆಯ ಚುನಾಯಿತ ಜನಪ್ರತಿ ನಿಧಿಗಳು ಮತ್ತು ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ರೈತರಿಗೆ ವರವಾಗುವ ಬದಲು ಮಾರಕವಾಗಿಯೆ ಉಳಿದು ಬಿಟ್ಟಿದೆ.
ವರ್ಷದಲ್ಲಿ ಆರು ತಿಂಗಳ ಕಾಲ ಮಳೆ ಸುರಿದು ಹರಿದು ಪೋಲಾಗುವ ನೀರನ್ನು ತಡೆದು ಜಲಾಶಯ ಕಟ್ಟಿ ರೂಪಿಸಿದ ಈ ನೀರಾವರಿ ಯೋಜನೆ ಅಂದಿನ ಓರ್ವ ರಾಜಕಾರಣಿಯ ಸ್ವಾರ್ಥಕ್ಕೆ ಬಲಿಯಾದದ್ದು ಈಗ ಇತಿಹಾಸ.
ಆದರೆ, ರೈತರ ಕಲ್ಯಾಣ ಬಯಸಿ ಅನ್ನದಾತನ ಉನ್ನತಿಯನ್ನು ಆಧರಿಸಿ ಹಾಗೂ ಆಶ್ರಯಿಸಿ ರಾಜಕಾರಣ ಮಾಡಬೇಕಿದ್ದ ಜಿಲ್ಲೆಯ ಜನಪ್ರತಿನಿಧಿಗಳು ಈ ಯೋಜನೆಯ ಬಗ್ಗೆ ತಾಳಿದ ಮೃಧು ಧೋರಣೆ ಮಹತ್ವಾಕಾಂಕ್ಷೆಯ ನೀರಾವರಿ ಯೋಜನೆಯ ಕಡೆಗಣನೆಗೆ ಕಾರಣವಾಗಿದೆ ಎಂಬುದು ಮಾತ್ರ ಬೇಸರದ ಸಂಗತಿ.
ಪ್ರಕೃತಿಯ ಸುಂದರ ಚೆಲುವಿನ ಪರಿಸರದಲ್ಲಿ ಮೂರು ದಶಕಗಳ ಹಿಂದೆ ಕೋಟ್ಯಾಂತರ ರೂಪಾಯಿ ಗಳನ್ನು ವ್ಯಯಿಸಿ ರೂಪಿಸಿದ ಈ ಯೋಜನೆ ಅಂದಿನಿAದ ಇಂದಿನವರೆಗೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಲ್ಯಾಣಕ್ಕೆ ಮೀಸಲಿರುವುದು ಮಾತ್ರ ನಗ್ನ ಸತ್ಯ.
ಏಕೆಂದರೆ ಇದೀಗ ಈ ಜಲಾಶಯದ ಬಳಿ ತೆರಳಿ ನೋಡಿದರೆ ಇದೊಂದು ಸರ್ಕಾರದ ನಿರ್ಲಕ್ಷಿತ ಯೋಜನೆಯಾಗಿ ಹಾಳಾಗಿರುವುದು ಪರಿಸರ ಪ್ರಿಯರಿಗೆ ಹಾಗೂ ಕೃಷಿಕರಿಗೆ ಬೇಸರ ತರಿಸುತ್ತದೆ. ಸುಂದರ ಪರಿಸರದಲ್ಲಿ ಮೈದಳೆದಿದ್ದ ಈ ಯೋಜನಾ ಘಟಕದ ನೂರಾರು ಎಕರೆ ಆವರಣ ಕುರುಚಲು ಗಿಡಗಳಿಂದ ಆವೃತವಾಗಿದೆ. ಇಲ್ಲಿ ಬೆಳೆದಿರುವ ಕುರುಚಲು ಕಾಡು ಕಡಿಯಲು ಕೂಡ ಸರ್ಕಾರದಿಂದ ಹಣ ಬಿಡುಗಡೆಗೊಂಡಿಲ್ಲ ಎಂದು ಸ್ವತಃ ಅಧಿಕಾರಿಗಳೇ ಹೇಳುತ್ತಾರೆ.
ದುರಸ್ತಿಗೊಂಡ ಜಲಾಶಯದ ಗೇಟು: ಜಲಾಶಯದಿಂದ ನದಿಗೆ ನೀರು ಹರಿಸುವ ಪ್ರಮುಖ ದ್ವಾರ ದುರಸ್ತಿಗೀಡಾಗಿದ್ದು ನೀರೆಲ್ಲಾ ಪೋಲಾಗಿ ಹರಿಯುತ್ತಿದ್ದರೂ ಕೂಡ ಮಳೆಗಾಲದ ಪೂರ್ವದಲ್ಲಿ ಈ ದ್ವಾರವನ್ನು ಸರಿಪಡಿಸಿ ಅಮೂಲ್ಯವಾದ ಜಲಸಂಪತ್ತನ್ನು ಸಂರಕ್ಷಿಸಿ ಜೋಪಾನವಾಗಿಸುವ ಇರಾದೆ ಯಾವೊಬ್ಬ ಅಧಿಕಾರಿಗೂ ಇಲ್ಲ. ಜನಪ್ರತಿನಿಧಿಗಳಿಗೆ ಇದರ ಪರಿವೇ ಇಲ್ಲ. ಜಲಾಶಯದ ಮುಂಬದಿ ಯಲ್ಲಿರುವ ಮುಖ್ಯ ನಾಲೆಯ ಎರಡು ಬದಿ ಕುಸಿದು ಹಾಳಾಗಿದೆ. ಜೊತೆಗೆ ನಾಲೆಯಲ್ಲಿ ಕಾಡು ಗಿಡಗಳು ಬೆಳೆದು ಹೂಳು ತುಂಬಿದ್ದರೂ ಕೂಡ ಅದನ್ನು ತೆರವುಗೊಳಿಸುವ ಕೆಲಸವೇ ಆಗಿಲ್ಲ ಎಂದು ರೈತರು ದೂರುತ್ತಿದ್ದಾರೆ.
ಜಲಾಶಯದ ನಾಲೆಯಲ್ಲಿ ಮಳೆಗಾಲದ ಬೆಳೆಗೆಂದು ಹರಿಸುವ ನೀರು ಜಲಾಶಯದ ಅನತಿ ದೂರದ ಕಬ್ಬಿನಗದ್ದೆ ಬಳಿಯ ನಾಲೆಯ ಒಳಗೆ ಮೋಳೆ ಬಿದ್ದು ನೀರೆಲ್ಲ ರೈತರ ಜಮೀನು ಹಾಗೂ ವಾಸದ ಮನೆಯ ಬಳಿಯೇ ಹರಿದು ಇಡೀ ಪ್ರದೇಶವನ್ನು ಶೀತಮಯವಾಗಿಸಿದ್ದರೂ ಕೂಡ ಆ ಮೋಳೆಯನ್ನು ಮುಚ್ಚುವ ಕೆಲಸ ಇದುವರೆಗೂ ಆಗಿಲ್ಲ. ಹಾಗಾಗಿ ಕೃಷಿಕರ ಗದ್ದೆಗಳಿಗೆಂದು ಹರಿಸುವ ನೀರು ಕಾವೇರಿ ನದಿಗೆ ಹರಿಯುತ್ತಿದೆ.
ರೈತರ ಆಶಯ ನೀರು ಪಾಲು: ಜಲಾಶಯ ನಿರ್ಮಾಣವಾದಾಗ ತಮ್ಮ ಪಾಲಿನ ಭೂಮಿಯೆಲ್ಲಾ ನೀರಾವರಿ ಯೋಜನೆಗೆ ಒಳಪಡುವ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದ ಈ ಭಾಗದ ಕೃಷಿಕರ ಕನಸು ನಿರ್ನಾಮಗೊಂಡಿದೆ. ಅಂದರೆ ಈ ಭಾಗದ ಕಾಡಂಚಿನ ರಂಗಸಮುದ್ರ, ನಂಜರಾಯಪಟ್ಟಣ, ವಿರೂಪಾಕ್ಷಪುರ, ಹೊಸಪಟ್ಟಣ, ಗುಡ್ಡೆಹೊಸೂರು, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಗೊಂದಿಬಸವನಹಳ್ಳಿ, ಬಳ್ಳೂರು, ಬಸವನಹಳ್ಳಿ ಮೊದಲಾದ ಗ್ರಾಮಗಳ ೨೧೩೫ ಎಕರೆ ಭೂಮಿಗೆ ನೀರುಣಿ ಸಬೇಕಿದ್ದ ಎಡದಂಡೆಯ ೧೬ ಕಿ.ಮೀ. ಹಳೆಯ ಕಾಲುವೆ, ೨೯ ಕಿ.ಮೀ. ಹೊಸಕಾಲುವೆ ಹಾಗೂ ಬಲದಂಡೆಯ ೧೧ ಕಿ.ಮೀ. ಕಾಲುವೆಗಳಲ್ಲಿ ಹರಿಯಬೇಕಿದ್ದ ನೀರು ಕ್ರಮಬದ್ಧವಾಗಿ ಹಾಗೂ ಸಮರ್ಪಕವಾಗಿ ಹರಿಯಲೇ ಇಲ್ಲ. ಜಲಾಶಯ ನಿರ್ಮಾಣಕ್ಕೆಂದು ಹೊಸ ಕನಸುಗಳನ್ನು ಕಟ್ಟಿ ಸಾವಿರಾರು ಎಕರೆ ಭೂಮಿಯನ್ನು ಜಲಾಶಯ ಹಾಗೂ ಜಲಾಶಯದ ಕಾಲುವೆಗಳ ನಿರ್ಮಾಣಕ್ಕೆ ಬಿಟ್ಟುಕೊಟ್ಟ ಈ ಭಾಗದ ಕೃಷಿಕರು ಈಗಲೂ ಈ ನೀರಾವರಿ ಇಲಾಖೆ ಸೃಷ್ಟಿಸಿರುವ ಕೃತಕ ಸಮಸ್ಯೆಗಳ ಸುಳಿಯಲ್ಲಿ ಮುಳುಗೇಳುತ್ತಾ ಸಾಕಷ್ಟು ನಷ್ಟಕ್ಕೆ ಒಳಗಾಗಿದ್ದರೂ ಕೂಡ ಇಲ್ಲಿನ ಜನಪ್ರತಿನಿಧಿಗಳು ಈ ಕೃಷಿಕರ ಕೂಗನ್ನು ವಿಧಾನಸೌಧದೊಳಗೆ ಕೇಳಿಸಿ ಸೂಕ್ತ ಪರಿಹಾರೋಪಾ ಯಗಳನ್ನು ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ರೈತರು ದೂರುತ್ತಿದ್ದಾರೆ.
ಕ್ಷೀಣಿಸಿದ ಕೃಷಿ ಭೂಮಿ: ಸರಿಸುಮಾರು ೨೧೩೫ ಎಕರೆ ಕೃಷಿ ಭೂಮಿಗೆ ನೀರು ಹರಿಸಬೇಕಿದ್ದ ಈ ನೀರಾವರಿ ಯೋಜನೆ ನಿರ್ಲಕ್ಷö್ಯಕ್ಕೆ ಒಳಗಾದ ಬಳಿಕ ಬೆಳೆ ಮಾಡಲು ಅಸಾಧ್ಯವಾದ್ದರಿಂದ ಮನನೊಂದ ಬಹಳಷ್ಟು ಕೃಷಿಕರು ಭತ್ತ ಬೆಳೆಯಲು ಅಣಿಗೊಳಿಸಿದ್ದ ನೂರಾರು ಎಕರೆ ಗದ್ದೆಗಳನ್ನು ಕಾಫಿ, ಮೆಣಸು, ಜೋಳ, ಶುಂಠಿ ಬೆಳೆಯಲು ತೆರೆದುಕೊಂಡರು. ಇನ್ನು ಕೆಲವರು ವ್ಯವಸ್ಥೆಯನ್ನು ಶಪಿಸುತ್ತಾ ಹಾಗೆಯೇ ಭೂಮಿಯನ್ನು ಪಾಳು ಬಿಟ್ಟರು.
ಇನ್ನು ರಾಜ್ಯ ಹೆದ್ದಾರಿಗೆ ಸಮೀಪದ ಕೆಲವರು ತಮ್ಮ ಭೂಮಿಯನ್ನು ವಸತಿ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡಿಕೊಂಡರು. ಹಾಗಾಗಿ ೨೧೩೫ ಎಕರೆ ಅಚ್ಚುಕಟ್ಟು ಭೂಮಿಯ ಪೈಕಿ ಈಗ ಕೇವಲ ೫೦೦ ರಿಂದ ೫೫೦ ಎಕರೆ ಮಾತ್ರ ಭತ್ತದ ಬೆಳೆಗೆ ಸೀಮಿತವಾಗಿದೆ ಎಂದು ಇಲ್ಲಿನ ರೈತ ಮುಖಂಡ ಬಿ.ಎಸ್. ಚಂದ್ರಶೇಖರ್ ವಿಷಾಧಿಸುತ್ತಾರೆ.
ಏನೇ ಇರಲಿ, ಈಗಲೂ ಕಾಲ ಮಿಂಚಿಲ್ಲ. ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಈಗಲೂ ಸರ್ಕಾರದ ಮೇಲೆ ಒತ್ತಡ ತಂದು ವಿಶೇಷ ಅನುದಾನವನ್ನು ತಂದು ಈ ಯೋಜನೆಗೆ ಕಾಯಕಲ್ಪ ನೀಡುವ ಮೂಲಕ ಕೃಷಿಕರ ಬೇಡಿಕೆಗೆ ಸ್ಪಂದಿಸಬೇಕಿದೆ.
- ಕೆ.ಎಸ್. ಮೂರ್ತಿ