*ಗೋಣಿಕೊಪ್ಪ, ಜೂ. ೨೩: ಪೋಷಕರಿಗೆ ಹೊರೆಯಾಗದಂತೆ ಕೊರೊನಾ ಕಾಲಘಟ್ಟದ ಸಂಕಷ್ಟದ ಪರಿಸ್ಥಿತಿಯನ್ನು ಮಾನವೀಯ ಮೌಲ್ಯಗಳಿಂದ ಗಣನೆಗೆ ತೆಗೆದುಕೊಂಡು ಸರ್ಕಾರದ ಸುತ್ತೋಲೆಯಂತೆ ವಿದ್ಯಾರ್ಥಿ ಶುಲ್ಕ ವಸೂಲಾತಿ ಮಾಡಬೇಕು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಅವರು ಸೂಚಿಸಿದ್ದಾರೆ.

ವೀರಾಜಪೇಟೆ ಜೆ.ಪಿ.ಏನ್.ಓ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿ ಮಾತನಾಡಿದರು.

ಬಹುತೇಕ ಪೋಷಕರಿಗೆ ಖಾಸಗಿ ಶಾಲೆಯವರು ಶುಲ್ಕ ಕಟ್ಟುವಂತೆ ಪೀಡಿಸುತ್ತಿದ್ದಾರೆ, ಸಂಕಷ್ಟದ ಪರಿಸ್ಥಿತಿಯಲ್ಲಿ ಈ ರೀತಿಯ ಒತ್ತಡ ಹೇರುವುದು ಪೋಷಕರಿಗೆ ಮಾನಸಿಕ ಕಿರಿಕಿರಿಯಾಗುತ್ತಿದೆ. ಪೋಷಕರನ್ನು ಪೀಡಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರು ಅರ್ಜಿಗಳು ಇಲಾಖೆಗೆ ಬಂದಿವೆ. ಇವುಗಳನ್ನು ಪರಿಶೀಲಿಸಿ ಪೋಷಕರಿಗೆ ಒತ್ತಡ ಹೇರುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಾತಿಯಲ್ಲಿ ಸಡಿಲಿಕೆಯ ಕ್ರಮ ಕೈಗೊಂಡು ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆಯ ನಿಯಮದಡಿ ಶುಲ್ಕ ಸಂಗ್ರಹಿಸಬೇಕು ಎಂದು ಆದೇಶಿಸಿದರು. ವಿದ್ಯಾರ್ಥಿಗಳ ದಾಖಲೆಗಳ ಹಾಗೂ ಕಲಿಕೆಗೆ ಅಡಚಣೆ ಉಂಟಾಗದAತೆ ಸೌಹಾರ್ದಯುತವಾಗಿ ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯಶಿಕ್ಷಕರು ಪೋಷಕರೊಂದಿಗೆ ವ್ಯವಹರಿಸುವಂತೆ ಸಲಹೆ ನೀಡಿದರು.

ಇದೇ ಸಂದರ್ಭ ಪೋಷಕರು ಶಾಲಾ ಶುಲ್ಕಕ್ಕೆ ಸಂಬAಧಿಸಿದAತೆ ದೂರುಗಳಿದ್ದಲ್ಲಿ ಬಿ.ಇ.ಒ ಕಚೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ತಿಳಿಸಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಯರು ಹಾಗೂ ತಾಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.