ಸಿದ್ದಾಪುರ, ಜೂ. ೨೪: ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಕೊರೊನಾ ಸೋಂಕಿತ ವ್ಯಕ್ತಿಯನ್ನು ಸಿದ್ದಾಪುರದ ಪೊಲೀಸರು ಪತ್ತೆ ಹಚ್ಚಿ ಆತನನ್ನು ಮತ್ತೆ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರೆಕಾಡು ಗ್ರಾಮದ ನಿವಾಸಿಯೊಬ್ಬರಿಗೆ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಮಡಿಕೇರಿಯ ಕೋವಿಡ್ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ತಾನು ಗುಣಮುಖನಾಗಿದ್ದರೂ ಕೂಡ ಮಡಿಕೇರಿಯ ಕೋವಿಡ್ ಆಸ್ಪತ್ರೆಯಿಂದ ವೈದ್ಯರು ತನ್ನನ್ನು ಕಳಿಸುತ್ತಿಲ್ಲ ಎಂದು ಬೇಸರಗೊಂಡು ಆಸ್ಪತ್ರೆಯಿಂದ ನಿನ್ನೆ ಪರಾರಿಯಾಗಿದ್ದ. ಈ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ವೈದ್ಯಾಧಿಕಾರಿಗಳು ದೂರು ನೀಡಿ ಈತನ ಪತ್ತೆಗಾಗಿ ಕೋರಿದ್ದರು.

ಸೋಂಕಿತ ವ್ಯಕ್ತಿ ಗುರುವಾರದಂದು ಬೆಳಿಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ತನಗೆ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೇಳಿಕೊಂಡನು. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಪೊಲೀಸರು ಕೂಡಲೇ ಆ್ಯಂಬುಲೆನ್ಸ್ ವಾಹನ ಬರುವಂತೆ ತಿಳಿಸಿದರು. ಆದರೆ ಆ್ಯಂಬುಲೆನ್ಸ್ನಲ್ಲಿ ರೋಗಿಯನ್ನು ಕರೆದುಕೊಂಡು ಹೋಗುವ ಮಾಹಿತಿ ತಿಳಿದ ವ್ಯಕ್ತಿ ಅಲ್ಲಿಂದಲೂ ಓಟಕಿತ್ತಿದ್ದಾನೆ.

ತಕ್ಷಣವೇ ಕಾರ್ಯ ಪ್ರವೃತ್ತರಾದ ಸಿದ್ದಾಪುರ ಪೊಲೀಸರು ಪರಾರಿಯಾದ ವ್ಯಕ್ತಿಯನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸಿ ಮಾಹಿತಿ ಕಲೆ ಹಾಕಿದರು. ಸೋಂಕಿತನು ತನ್ನ ಪರಿಚಿತನೋರ್ವನೊಂದಿಗೆ ವೀರಾಜಪೇಟೆಯ ರಸ್ತೆಯ ಮೂಲಕ ಬೈಕ್‌ನಲ್ಲಿ ತೆರಳುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದು, ಪೊಲೀಸರು ಸುತ್ತುವರಿದು ಸೋಂಕಿತನು ಮತ್ತೆ ಓಡಿಹೋಗದಂತೆ ತಡೆಯುವಲ್ಲಿ ಯಶಸ್ವಿಯಾದರು. ನಂತರ ಸೆರೆಹಿಡಿದಿದ್ದ ಸೋಂಕಿತ ವ್ಯಕ್ತಿಯನ್ನು ಆ್ಯಂಬುಲೆನ್ಸ್ ಮೂಲಕ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೊನೆಗೂ ಪೊಲೀಸರು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಯಿತು. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಮೋಹನ್‌ರಾಜ್, ಸಿಬ್ಬಂದಿಗಳು ಭಾಗವಹಿಸಿದ್ದರು. - ವಾಸು