ಕೂಡಿಗೆ, ಜೂ. ೨೪: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದಲ್ಲಿ ಹಾರಂಗಿ ಉಪ ಕಾಲುವೆ ಹರಿಯುವ ಜಾಗದ ಸಮೀಪದ ಮನೆಯ ಗೋಡೆ ಬಿರುಕುಗೊಂಡು ಬೀಳುವ ಹಂತದಲ್ಲಿದೆ.

ಕಣಿವೆ ಗ್ರಾಮದ ಕೂಲಿ ಕಾರ್ಮಿಕ ಶರಾವತಿ ಮಂಜುನಾಥ್ ಎಂಬವರ ಮನೆಯು ರಾಜ್ಯ ಹೆದ್ದಾರಿ ಸಮೀಪದಲ್ಲಿದೆ. ಆದರೆ ಹಾರಂಗಿ ಮುಖ್ಯ ನಾಲೆಯಿಂದ ಬರುವ ನೀರು ಬೇಸಾಯಕ್ಕೆ ಬಳಕೆಯಾದ ನಂತರ ಹೆಚ್ಚುವರಿ ನೀರು ಉಪ ಕಾಲುವೆಯ ಮೂಲಕ ಹೆದ್ದಾರಿಯ ರಸ್ತೆಯನ್ನು ದಾಟಿ ಕಾವೇರಿ ಹೊಳೆಗೆ ಹರಿಯುತ್ತಿದೆ. ಆದರೆ ಕಳೆದ ಹತ್ತು ವರ್ಷಗಳಿಂದ ಕಾಂಕ್ರಿಟ್ ಕಾಲುವೆ ಮಾಡದೆ ಇರುವುದರಿಂದ ಮಳೆಗಾಲದಲ್ಲಿ ನಾಲೆಯ ನೀರಿನ ಪ್ರಮಾಣ ಹೆಚ್ಚಾಗುವುದರಿಂದ ಸಮೀಪದ ಮನೆಯ ಅಡಿಭಾಗದಲ್ಲಿ ನೀರಿನ ತೇವಾಂಶದಿAದಾಗಿ ಮನೆಯ ಗೋಡೆ ಶಿಥಿಲಗೊಂಡು ಗೋಡೆ ಬೀಳುವ ಹಂತ ತಲುಪಿದೆ.

ಕಳೆದ ಎರಡು ವರ್ಷಗಳಿಂದಲೂ ಸತತವಾಗಿ ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗುವುದರಿಂದ ಕಾವೇರಿ ನದಿಯ ತಟದ ಸಮೀಪದಲ್ಲಿರುವ ಕಣಿವೆ ಗ್ರಾಮಕ್ಕೆ ನೀರು ಬಂದ ಪರಿಣಾಮ ಕೆಲ ಮನೆಗಳಿಗೆ ನದಿಯ ನೀರು ನುಗ್ಗಿತ್ತು. ಇದರಿಂದಾಗಿ ಈ ಭಾಗದ ಅನೇಕ ಮನೆಗಳು ಶೀತಮಯವಾಗಿ ಗೋಡೆಗಳು ಬಿರುಕುಗೊಂಡಿವೆ. ಕಳೆದ ಎರಡು ವರ್ಷಗಳಿಂದ ಮನೆಗಳ ಪರಿಶೀಲನೆ ನಡೆಸಿರುವ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ, ಕಾವೇರಿ ನೀರಾವರಿ ನಿಗಮ ಇದುವರೆಗೂ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ, ಪರಿಹಾರವನ್ನು ನೀಡದೆ ಈ ಬಾರಿಯು ಕೂಡ ಮುನ್ನೆಚ್ಚರಿಕೆಯ ಪತ್ರವನ್ನು ಕಂದಾಯ ಇಲಾಖೆ ಮುಖೇನ ಗ್ರಾಮ ಪಂಚಾಯಿತಿ ನೀಡಿದೆ. ಇದುವರೆಗೂ ಮನೆಯ ದುರಸ್ತಿ ಪರಿಹಾರವನ್ನು ನೀಡಿಲ್ಲಾ ಎಂಬುದು ಇಲ್ಲಿನ ಗ್ರಾಮಸ್ಥರ ಅಳಲಾಗಿದೆ. ಸಂಬAಧಿಸಿದ ನೀರಾವರಿ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಸೂಕ್ತವಾದ ಕಾಂಕ್ರಿಟ್ ಕಾಲುವೆಯ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.