ಸೋಮವಾರಪೇಟೆ, ಜೂ. ೨೪: ಮಳೆಗಾಲದಲ್ಲಿ ಮನೆಗೆ ಹಾನಿ ಯಾಗುವ ಭೀತಿಯಲ್ಲಿ ಸರ್ಕಾರಿ ಶಾಲೆಯ ಕತ್ತಲ ಕೋಣೆಗೆ ಸ್ಥಳಾಂತರ ಗೊಂಡಿದ್ದ ದೊಡ್ಡತೋಳೂರು ಅಂಗನವಾಡಿ ಶಿಕ್ಷಕಿಯ ಕುಟುಂಬದ ಅಳಲನ್ನು ಆಲಿಸಿದ ತೋಳೂರು ಶೆಟ್ಟಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಬಾಡಿಗೆ ಮನೆಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.

ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡತೋಳೂರು ನಿವಾಸಿ ಎ.ಜೆ. ರಮೇಶ್ ಹಾಗೂ ಪ್ರೇಮ ದಂಪತಿ ವಾಸವಿರುವ ಮನೆ ಪ್ರಸ್ತುತದ ಮಳೆಗಾಲದಲ್ಲಿ ಕುಸಿಯುವ ಆತಂಕ ಎದುರಿಸುತ್ತಿದ್ದು, ಪಂಚಾಯಿತಿಯ ನೋಟೀಸ್ ಹಿನ್ನೆಲೆ ಸರ್ಕಾರಿ ಶಾಲೆಗೆ ಕುಟುಂಬ ಸ್ಥಳಾಂತರಗೊAಡಿತ್ತು.

ಕಳೆದ ಕೆಲ ವರ್ಷಗಳ ಹಿಂದೆಯೇ ಮುಚ್ಚಲ್ಪಟ್ಟು ನಿರ್ವಹಣೆಯ ಕೊರತೆ ಎದುರಿಸುತ್ತಿರುವ ಶಾಲಾ ಕೊಠಡಿಯಲ್ಲಿ ವಿದ್ಯುತ್, ಸ್ನಾನ ಗೃಹ, ಶೌಚಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೇ ಪ್ರೇಮಾ ಹಾಗೂ ಅವರ ಪುತ್ರಿ ಕಳೆದ ಒಂದು ವಾರದಿಂದ ದಿನದೂಡುತ್ತಿದ್ದರು.

ಪ್ರೇಮಾ ಅವರ ಕುಟುಂಬದ ಕತ್ತಲ ಬದುಕಿನ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರು ಸ್ಪಂದಿಸಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಶಾಲೆಗೆ ಕಳುಹಿಸಿ ಕುಟುಂಬದ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಶಾಲೆಗೆ ತೆರಳಿದ ತೋಳೂರುಶೆಟ್ಟಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಂಜುಳಾ ಹಾಗೂ ಸಿಬ್ಬಂದಿಗಳು, ಪ್ರೇಮಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಸಮಸ್ಯೆಯ ಬಗ್ಗೆ ಮಾಹಿತಿ ಪಡೆದರು. ಯಾವುದೇ ಸುರಕ್ಷತೆ ಹಾಗೂ ಕನಿಷ್ಟ ಮೂಲಭೂತ ಸೌಕರ್ಯವೂ ಇಲ್ಲದ ಶಾಲಾ ಕೊಠಡಿಯಲ್ಲಿ ತಂಗುವುದು ಸಮಂಜಸವಲ್ಲ ಎಂದು ಅಭಿಪ್ರಾಯಿಸಿದ ಪಿಡಿಓ, ತಕ್ಷಣ ಬಾಡಿಗೆ ಮನೆಯ ವ್ಯವಸ್ಥೆ ಕಲ್ಪಿಸಲಾಗುವುದು. ಇದರೊಂದಿಗೆ ಮನೆಯ ಸಾಮಗ್ರಿಗಳನ್ನು ಪಂಚಾಯಿತಿಯ ವಾಹನದಲ್ಲೇ ಸಾಗಿಸಲಾಗುವುದು ಎಂದು ಭರವಸೆ ನೀಡಿದರು.

ತಾ. ೨೪ರಂದು ಬಾಡಿಗೆ ಮನೆಗೆ ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ೨ ವರ್ಷಗಳಿಂದ ಪಂಚಾಯಿತಿಗೆ ಯಾವುದೇ ಮನೆಗಳೂ ಮಂಜೂರಾಗಿಲ್ಲ. ಮನೆಗಳು ಮಂಜೂರಾದ ತಕ್ಷಣ ಆದ್ಯತೆಯ ಮೇರೆ ಮನೆ ಒದಗಿಸಲಾಗುವುದು ಎಂದು ಪಿಡಿಓ ಮಂಜುಳಾ ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.