ಮಡಿಕೇರಿ, ಜೂ. ೨೩: ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಗಾಳಿಬೀಡು, ಕೆ. ನಿಡುಗಣೆ ಮತ್ತು ಮಕ್ಕಂದೂರು ಗ್ರಾ.ಪಂ.ಗಳಿಗೆ ಭೇಟಿ ನೀಡಿ ಕೋವಿಡ್ ನಿರ್ವಹಣೆ ಹಾಗೂ ಮಳೆಹಾನಿ ಕುರಿತು ಮಾಹಿತಿ ಪಡೆದ ಅವರು ಅತಿವೃಷ್ಟಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
೨೦೧೮, ೧೯ ಮತ್ತು ೨೦ರಲ್ಲಿ ಸಂಭವಿಸಿದ ಮಳೆಹಾನಿಗೆ ಸಂಬAಧಿಸಿದAತೆ ಇನ್ನೂ ಕೂಡ ಪರಿಹಾರ ಸಮರ್ಪಕವಾಗಿ ವಿತರಣೆಯಾಗದೆ ಇರುವುದು ಹಾಗೂ ಕಾಮಗಾರಿಗಳು ನಡೆಯದೆ ಇರುವ ಬಗ್ಗೆ ವೀಣಾ ಅಚ್ಚಯ್ಯ ಬೇಸರ ವ್ಯಕ್ತಪಡಿಸಿದರು.
ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕೆ.ಎಸ್. ಬಿದ್ದಪ್ಪ ಎಂಬವರು ೨೦೧೮ ರಲ್ಲಿ ಮಹಾಮಳೆಗೆ ಮನೆ ಕಳೆದುಕೊಂಡು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗದೆ ಇರುವ ಬಗ್ಗೆ ವಿಧಾನ ಪರಿಷತ್ ಸದಸ್ಯರ ಗಮನ ಸೆಳೆದರು.
ತಕ್ಷಣ ವೀಣಾ ಅಚ್ಚಯ್ಯ ಅವರು ಉಪವಿಭಾಗಾಧಿಕಾರಿಗಳ ಕಚೇರಿಗೆ ಕರೆ ಮಾಡಿ ಬಿದ್ದಪ್ಪ ಅವರ ಕಡತ ವಿಲೇವಾರಿಗೆ ಸೂಚನೆ ನೀಡಿದರು. ಅಲ್ಲದೆ ಕಳೆದ ಮಳೆಹಾನಿ ಪರಿಹಾರ ಮತ್ತು ಮುಂದಿನ
(ಮೊದಲ ಪುಟದಿಂದ) ದಿನಗಳ ಅತಿವೃಷ್ಟಿ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕೋವಿಡ್ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡ ಅವರು ಕೋವಿಡ್ ಮೂರನೇ ಅಲೆ ಎದುರಿಸಲು ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಂಚಾಯಿತಿ ಪ್ರತಿನಿಧಿಗಳಿಗೆ ಸಲಹೆ ನೀಡಿದರು.
ಮಕ್ಕಂದೂರು ಗ್ರಾ.ಪಂ. ಸಭೆಗೆ ಭೇಟಿ ನೀಡಿದ್ದ ವೀಣಾ ಅಚ್ಚಯ್ಯ ಅವರು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು. ಅಲ್ಲದೆ ಕೋವಿಡ್ ಸೋಂಕು ವ್ಯಾಪಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಮಕ್ಕಂದೂರು ಗ್ರಾ.ಪಂ. ಅಧ್ಯಕ್ಷ ಕನ್ನಿಕಂಡ ಶ್ಯಾಂ ಸುಬ್ಬಯ್ಯ, ಉಪಾಧ್ಯಕ್ಷೆ ಪಿ.ಎಸ್. ಕವಿತಾ ಹಾಗೂ ಸದಸ್ಯರು, ಕೆ. ನಿಡುಗಣೆ ಪಂಚಾಯಿತಿ ಅಧ್ಯಕ್ಷ ಕೆ.ಕೆ. ಅಯ್ಯಪ್ಪ, ಉಪಾಧ್ಯಕ್ಷೆ ಕೆ.ಡಿ. ಪಾರ್ವತಿ, ಸದಸ್ಯರುಗಳಾದ ಜಾನ್ಸನ್ ಪಿಂಟೋ, ಎಂ.ಡಿ. ಬೋಪಣ್ಣ, ಗಾಳಿಬೀಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎ. ಶಶಿಕಿರಣ್, ಪ್ರಮುಖರಾದ ಪುಷ್ಪ ಪೂಣಚ್ಚ, ಕೆ.ಎಸ್. ಬಿದ್ದಪ್ಪ, ಎ. ಪೊನ್ನಪ್ಪ, ಎ.ಬಿ. ಗಣಪತಿ ಮತ್ತಿತರರು ಹಾಜರಿದ್ದರು.