ಕಣಿವೆ, ಜೂ. ೨೩: ಕಳೆದ ಒಂದೂವರೆ ವರ್ಷಗಳಿಂದಲೂ ಗಣನೀಯವಾದ ಬೆಲೆ ಇಳಿಕೆಯೊಂದಿಗೆ ಬೆಳೆಗಾರನಿಗೆ ಸಂಕಷ್ಟವನ್ನು ತಂದೊಡ್ಡಿದ್ದ ಶುಂಠಿಗೆ ಇದೀಗ ಒಂದಷ್ಟು ಬೆಲೆ ಏರಿಕೆ ಆಗಿದೆ. ಒಂದು ವರ್ಷ ಅವಧಿ ಪೂರೈಸಿದ ಹಳೆಯ ಶುಂಠಿಗೆ ಮಾರುಕಟ್ಟೆಯಲ್ಲಿ ಏರಿಕೆ ಕಂಡ ಶುಂಠಿ ದರದಿಂದಾಗಿ ಬೆಳೆಗಾರನ ಮೊಗದಲ್ಲಿ ಒಂದಷ್ಟು ಸಂತಸ - ಸಮಾಧಾನ ಮೂಡಿದೆ.
೬೦ ಕೆಜಿ ತೂಕದ ಒಂದು ಚೀಲ ಶುಂಠಿ ಫಸಲಿಗೆ ಇದೀಗ ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ೨೩೦೦ ರಿಂದ ೨೪೦೦ ರೂಗಳಷ್ಟು ಇದೆ.
ಕಳೆದ ೨೦೨೦ ರ ಜುಲೈ ತಿಂಗಳಿAದ ೨೦೨೧ ರ ಜೂನ್ ತಿಂಗಳವರೆಗೂ ಒಂದು ಚೀಲ ಶುಂಠಿಗೆ ಕನಿಷ್ಟ ೭೫೦ ರಿಂದ ಗರಿಷ್ಠ ೧೧೦೦ ರೂ. ಗಳು ಮಾತ್ರ ಇತ್ತು.
ಆದರೆ ಕಳೆದ ಒಂದು ವಾರದ ಈಚೆಗೆ ಚೀಲವೊಂದರ ಶುಂಠಿಗೆ ೧೨೦೦ ರೂಗಳಷ್ಟು ಏರಿಕೆ ಕಂಡಿದೆ.
ಆದರೆ ಏರಿಕೆಗೊಂಡ ಈ ಬೆಲೆ ಎಷ್ಟು ದಿನ ಸ್ಥಿರತೆ ಕಾಯ್ದುಕೊಂಡಿರುತ್ತದೆ ಎಂಬುದು ಇಲ್ಲಿ ಮುಖ್ಯ. ಕಳೆದ ವರ್ಷದ ಅಂದರೆ ೨೦೨೦ ರ ಮಾರ್ಚ್ ನಿಂದ ಮೇ ತಿಂಗಳವರೆಗೂ ಬಿತ್ತನೆ ಮಾಡಿದ ಶುಂಠಿ ಬೆಳೆಗಾರರು ಮುಂದಿನ ಬಿತ್ತನೆ ದಿನದಿಂದ ೬ ರಿಂದ ೮ ತಿಂಗಳ ಅವಧಿಯೊಳಗೆ ಕಟಾವು ಮಾಡಬೇಕಾಗಿದ್ದು, ಶುಂಠಿ ಬೆಳೆ ಸಂಪೂರ್ಣವಾಗಿ ಕುಸಿತಗೊಂಡಿದ್ದ ಕಾರಣ ಒಂದಷ್ಟು ಮಂದಿ ಆಗ ಇದ್ದ ಕನಿಷ್ಟ ದರ ೯೫೦ ರಿಂದ ೧೦೦೦ ರೂ.ಗಳಿಗೆ ಮಾರಾಟ ಮಾಡಿ ಲಕ್ಷಾಂತರ ರೂ.ಗಳ ನಷ್ಟಕ್ಕೆ ಒಳಗಾಗಿದ್ದರು. ಇನ್ನು ೫೦ ರಿಂದ ೧೦೦ ಎಕರೆ ಭೂಮಿಯಲ್ಲಿ ಶುಂಠಿ ಬೆಳೆದಿದ್ದ ಬಂಡವಾಳ ಶಾಹಿ ಬೆಳೆಗಾರರು ಆವಾಗ ಮಾರುಕಟ್ಟೆಯಲ್ಲಿದ್ದ ದರದಿಂದ ಬೇಸತ್ತು ಹೇಗಿದ್ದರೂ ನಷ್ಟ - ಸಂಕಷ್ಟದ ಸಂಕೋಲೆಯೊಳಗೆ ಈ ಬಾರಿ ಮುಳುಗಿದ್ದೇವೆ. ಆದದ್ದು ಆಗೇ ಹೊಗಲಿ ಎಂದು ಹಾಗೆಯೇ ಭೂಮಿಯಲ್ಲೇ ಶುಂಠಿ ಫಸಲನ್ನು ಬಿಟ್ಟು ಮಣ್ಣು ಮುಚ್ಚಿಸಿ ನಿರ್ವಹಣೆ ಮಾಡಿದ್ದರು.
ಇದೀಗ ಬರೋಬ್ಬರಿ ೧೨ ರಿಂದ ೧೪ ತಿಂಗಳು ಕಳೆದ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿನ ೨೪೦೦ ರೂ. ಮಾಡಿದ ಖರ್ಚಿಗೂ ಸಾಕಾಗುವುದಿಲ್ಲವಾದರೂ ಕೂಡ ಸಂಭವನೀಯ ಒಟ್ಟು ನಷ್ಟದಲ್ಲಿ ಒಂದಷ್ಟು ಕಡಿಮೆಯಾಗಲಿದೆ ಎಂಬುದೇ ಕೆಲವರಿಗೆ ಸಮಾಧಾನ ತರುವ ವಿಚಾರ.
ಇದೇ ಹಳೆಯ ಶುಂಠಿಗೆ ಜೂನ್ ೨೦೧೮ ಹಾಗೂ ೨೦೧೯ ರ ಅವಧಿಯಲ್ಲಿ ಒಂದು ಚೀಲಕ್ಕೆ ೯ ರಿಂದ ೧೧ ಸಾವಿರ ರೂ.ಗಳಿಗೂ ಮಾರಾಟ ಮಾಡಿದ್ದಿದೆ.
ಬೆಲೆ ಇಳಿಕೆಯ ನಡುವೆಯೂ ಈ ಮೊದಲೇ ನಷ್ಟಕ್ಕೆ ಸಿಲುಕಿದ್ದ ಬಹಳಷ್ಟು ಮಂದಿ ಈ ಬಾರಿಯಾದರೂ ಉತ್ತಮ ಬೆಲೆ ಬರಬಹುದು ಎಂಬ ನಿರೀಕ್ಷೆಯ ಆಶಾಭಾವದೊಂದಿಗೆ ಈ ವರ್ಷವೂ ಶುಂಠಿ ಬೆಳೆ ಬೆಳೆದಿರುವ ಕೃಷಿಕರಿಗೆ ಹಳೆಯ ಶುಂಠಿಯ ದರ ಏರಿಕೆ ಮೊಗದಲ್ಲಿ ಕೊಂಚ ಖುಷಿ ಮೂಡಿಸಿದೆ.
ಹಳೆಯ ಶುಂಠಿಯ ದರ ೨೩೦೦ ರಿಂದ ೨೪೦೦ ರೂ ಇದೆಯಾದರೂ ಹೊಸ ಶುಂಠಿಗೆ ದರ ನಿಗದಿಯಾಗಿಲ್ಲ.
ಆದರೆ ೨೦೧೯ ರ ಜುಲೈ ಆರಂಭದಲ್ಲಿ ಹೊಸ ಶುಂಠಿಗೂ ಮಾರುಕಟ್ಟೆಯಲ್ಲಿ ಗರಿಷ್ಠ ಅಂದರೆ ೫೬೦೦ ರೂ.ಗಳಿತ್ತು. ಆದರೆ ಅದು ೨೦೨೦ ರಲ್ಲಿ ಕೊರೊನಾ ಮೊದಲ ಅಲೆಯ ಆರ್ಭಟಕ್ಕೆ ಮುಚ್ಚಿದ ವಾಣಿಜ್ಯ ಚಟುವಟಿಕೆಗಳಿಂದಾಗಿ ಕೇವಲ ೧೦೦೦ ಕ್ಕೆ ಕುಸಿದಿತ್ತು.
ಆದರೆ ೨೦೨೧ ಕ್ಕೆ ಕನಿಷ್ಟ ೨೦೦೦ ರೂ.ಗಳಾದರೂ ಬಂದರೆ ಸಾಕಪ್ಪಾ ಎಂಬ ಮನೋಭಾವದಲ್ಲಿ ಬೆಳೆಗಾರರಿದ್ದರು.
ಕಳೆದ ಮೂರ್ನಾಲ್ಕು ವರ್ಷಗಳ ಈಚೆಗೆ ಒಂದು ಎಕರೆ ಭೂಮಿಯಲ್ಲಿ ಕನಿಷ್ಟ ೬ ರಿಂದ ೮ ತಿಂಗಳ ಅವಧಿಯ ಶುಂಠಿ ಬೇಸಾಯ ಕೈಗೊಳ್ಳಲು ಬರೋಬ್ಬರಿ ೩ ರಿಂದ ೩.೫೦ ಲಕ್ಷ ಹಣ ಖರ್ಚಾಗುತ್ತಿದೆ. ರೋಗ ರುಜಿನಗಳಿಲ್ಲದೇ ಬೆಳೆ ಉತ್ತಮವಾಗಿ ಬಂದರೆ ಒಂದು ಎಕರೆ ಭೂಮಿಯಲ್ಲಿ ೨೫೦ ರಿಂದ ೨೭೫ ಚೀಲ ಶುಂಠಿ ಫಸಲು ಬರುತ್ತದೆ. ಹಾಗಾಗಿ ೨೦೦೦ ರೂ ಬೆಲೆ ಸಿಕ್ಕರೆ ಮಾತ್ರ ಬೆಳೆಗಾರನಿಗೆ ಮಾಡಿದ ಕರ್ಚು ಕಳೆದು ಒಂದಷ್ಟು ಲಾಭ ಬಂದೀತು. ಬೆಲೆ ಏನಾದರೂ ೧೫೦೦ ರೂ ಒಳಕ್ಕೆ ಇಳಿಕೆ ಕಂಡರೆ ಮತ್ತೆ ಈ ಬಾರಿಯೂ ಬೆಳೆಗಾರ ನಷ್ಟಕ್ಕೆ ಸಿಲುಕುತ್ತಾನೆ.
ಆದರೆ ಹಾಗಾಗುವುದು ಬೇಡ. ಒಳ್ಳೆಯ ಬೆಲೆ ಹಾಗೂ ಬೆಳೆ ಎರಡೂ ಕೂಡಿ ಬಂದು ಬೆಳೆಗಾರರ ಮೊಗವನ್ನು ಅರಳಿಸಲಿ ಅಷ್ಟೆ.
- ಕೆ.ಎಸ್. ಮೂರ್ತಿ