ಸೋಮವಾರಪೇಟೆ, ಜೂ. ೨೩: ಕಳೆದ ೨೦೧೫ರ ನವೆಂಬರ್ ೨೭ರಿಂದಲೇ ಕರ್ತವ್ಯಕ್ಕೆ ಗೈರಾಗಿದ್ದ ಶಾಂತಳ್ಳಿ ಹೋಬಳಿ ನಾಡ ಕಚೇರಿಯಲ್ಲಿ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಖಿಲೇಶ್ ಎಂಬಾತನನ್ನು ಇದೀಗ ಸರ್ಕಾರ ಸೇವೆಯಿಂದ ವಜಾಗೊಳಿಸಿದೆ!
ಶಾಂತಳ್ಳಿ ಹೋಬಳಿಯ ಕುಂದಳ್ಳಿ ವೃತ್ತದ ಗ್ರಾಮ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದ ಎಸ್.ಪಿ. ಅಖಿಲೇಶ್, ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿರುವ ಕಾರಣ ನೀಡಿ ಕೆ.ಸಿ.ಎಸ್. ಪ್ರೊಬೇಷನರಿ ನಿಯಮಗಳು ೧೯೭೭ರ ನಿಯಮ ೬(೧) ಅನುಸಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
ನಕಲಿ ದಾಖಲೆಗಳ ಸರದಾರ: ಶಾಂತಳ್ಳಿ ನಾಡಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಖಿಲೇಶ್, ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಮನೆ ಎದುರು ನೂರಾರು ದಾಖಲೆಗಳಿಗೆ ಬೆಂಕಿ ಹಾಕುತ್ತಿದ್ದ ಸಂದರ್ಭ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದ. ಈ ಪ್ರಕರಣವನ್ನು ಕೆದಕುತ್ತಾ ಹೋದಂತೆ ಈತನ ನಕಲಿ ದಾಖಲೆಗಳ ಧಾರವಾಹಿಯೇ ಬೆಳಕಿಗೆ ಬಂದಿತ್ತು.
ಈತ ಕೇರಳದ ಕಾಸರಗೋಡು ಸೇರಿದಂತೆ ಬೆಂಗಳೂರು ಹಾಗೂ ಕೊಡಗಿನಲ್ಲೂ ಯುವತಿಯರನ್ನು ವಿವಾಹವಾಗಿರುವದು ಬೆಳಕಿಗೆ ಬಂದಿದ್ದು, ತನ್ನ ಬಳಿಯಿದ್ದ ಅಸಂಖ್ಯಾತ
(ಮೊದಲ ಪುಟದಿಂದ) ದಾಖಲಾತಿಗಳಿಗೆ ಬೆಂಕಿಯಿಟ್ಟು ಸೋಮವಾರಪೇಟೆಯಿಂದ ಪರಾರಿಯಾಗಿದ್ದ.
ಸುಮಾರು ೭ ಭಾಷೆಗಳನ್ನು ಬಲ್ಲವನಾಗಿದ್ದ, ಸೋಮವಾರಪೇಟೆಯಲ್ಲಿ ಅಖಿಲೇಶ್ ಎಂಬ ಹೆಸರಿನಲ್ಲಿಯೇ ವ್ಯವಹರಿಸುತ್ತಿದ್ದ ಈತ ತನಗೆ ಮದುವೆಯೇ ಆಗಿಲ್ಲ ಎಂದು ಹೇಳಿಕೊಳ್ಳುತ್ತಿದ್ದ. ಜಿಲ್ಲೆಯ ಹೊಸ್ಕೇರಿ ಗ್ರಾಮದ ಯುವತಿಯೋರ್ವಳನ್ನು ವಿವಾಹವಾಗಿದ್ದ. ಈತ ಇದಕ್ಕೂ ಮುನ್ನ ಕಾಸರಗೋಡಿನ ಮಂಜೇಶ್ವರ ವ್ಯಾಪ್ತಿಯ ಈರ್ವರು ಮುಸ್ಲಿಂ ಯುವತಿಯರನ್ನೂ ವಿವಾಹವಾಗಿದ್ದ.
ಸೋಮವಾರಪೇಟೆಯಲ್ಲಿ ಸಾವಿರಾರು ದಾಖಲೆ ಪತ್ರಗಳಿಗೆ ಮನೆಯ ಮುಂಭಾಗ ಬೆಂಕಿ ಹಾಕುತ್ತಿರುವದನ್ನು ಗಮನಿಸಿದ ಕೆಲವರು ಈ ಬಗ್ಗೆ ಪ್ರಶ್ನಿಸಿದ್ದರು. ನಂತರ ಇಲ್ಲಿನ ವೈದ್ಯರುಗಳ ವಸತಿ ಗೃಹದ ಹಿಂಭಾಗಕ್ಕೆ ರವಾನಿಸಿ ಸಾವಿರಾರು ಪತ್ರಗಳಿಗೆ ಬೆಂಕಿ ಹಾಕಿದ್ದ. ಇದಾದ ಎರಡು ದಿನಗಳ ನಂತರ ಮನೆ ಖಾಲಿ ಮಾಡಿ ಬೇರೆಡೆಗೆ ತೆರಳಿದ ಅಖಿಲೇಶ್ ನಂತರ ಪತ್ತೆಯಾಗಿರಲಿಲ್ಲ.
ಈತನ ನಕಲಿ ದಾಖಲೆಗಳ ಪುರಾಣ ತಾರ್ಕಿಕ ಅಂತ್ಯಕ್ಕೆ ತಲುಪಲೇ ಇಲ್ಲ. ಅಖಿಲೇಶ್, ಅಜಿತ್ಕುಮಾರ್, ಅಬ್ದುಲ್ ಅಜೀಜ್ ಶಾಹ್ ಹೆಸರಿನಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದ. ಅಂತಿಮವಾಗಿ ಈತನ ಬಳಿ ಯುಟಿಜೆಡ್೦೮೪೦೨೨೩ ಸಂಖ್ಯೆಯ ಗುರುತಿನ ಚೀಟಿಯು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಭಾಗ ನಂ.೧೧೯ರ, ಜಂಬೂರು ಭಾಗ ೨, ಜಿ.ಎಂ.ಪಿ. ಶಾಲೆಯ ಬೂತ್ಗೆ ಒಳಪಡುವ ಮನೆ ಸಂಖ್ಯೆ ೨೮೮ರ, ೫೦ ವರ್ಷ ವಯಸ್ಸಿನ ವ್ಯಕ್ತಿಯೋರ್ವರಿಗೆ ಸೇರಿದ್ದಾಗಿತ್ತು. ಇದನ್ನು ನಕಲು ಮಾಡಿ ತನ್ನ ಭಾವಚಿತ್ರ ಅಳವಡಿಸಿಕೊಂಡಿದ್ದ.
ಇನ್ನು ತಾಲೂಕು ಕಚೇರಿಯಲ್ಲಿ ಕೆಲಸಕ್ಕೆ ಸೇರಿದ ಸಂದರ್ಭ ನೀಡಿರುವ ದಾಖಲಾತಿಗಳಲ್ಲಿ ಅಖಿಲೇಶ್ ಎಂದೇ ಮುದ್ರಿತವಾಗಿದ್ದು, ಬೆಂಗಳೂರು ಬಸವೇಶ್ವರ ನಗರದ ಸಾಣೆಗುರುವರಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ೧೯೯೨/೯೩ರ ಸಾಲಿನಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ವರ್ಗಾವಣೆ ಪ್ರಮಾಣ ಪತ್ರ ನೀಡಲಾಗಿತ್ತು. ಇದರ ಕ್ಯುಮುರೇಟೆಡ್ ಸಂಖ್ಯೆ ೨೦೯೦೨/೯೨/೯೩ ಆಗಿದೆ. ಇದರಲ್ಲಿ ತಂದೆಯ ಹೆಸರು ಪ್ರಭಾಕರ ಎಸ್.ಎನ್., ತಾಯಿ ಭಾಗ್ಯಲಕ್ಷಿö್ಮÃ, ಹಿಂದೂ ಧರ್ಮ, ಗಂಗಟಕಾರ, ಒಕ್ಕಲಿಗ ಗೌಡ ಎಂದೇ ಮುದ್ರಿತವಾಗಿದ್ದು, ಕಳೆದ ತಾ.೧೩.೧೨.೨೦೧೪ಕ್ಕೆ ಸರ್ಕಾರಿ ಕೆಲಸಕ್ಕೆ ನೇಮಿಸಲ್ಪಟ್ಟಿದ್ದ.
ಹೀಗಿದ್ದರೂ ಸಹ ಅಬ್ದುಲ್ ಅಜೀಜ್ ಶಾಷ್, ಅಜಿತ್ಕುಮಾರ್ ಎಂಬ ಹೆಸರಿನ ದಾಖಲಾತಿಗಳು, ಗುರುತಿನ ಚೀಟಿಗಳನ್ನು ಹೊಂದಿದ್ದ. ಕಳೆದ ೨೦೧೫ರ ನವೆಂಬರ್ ೨೭ರಿಂದಲೇ ಕಚೇರಿಗೆ ಗೈರು ಹಾಜರಾಗಿದ್ದ. ಇದೀಗ ಸರ್ಕಾರ ಈತನನ್ನು ಸೇವೆಯಿಂದ ವಜಾ ಮಾಡಿದ್ದು, ಇಲ್ಲಿ ಗ್ರಾಮಲೆಕ್ಕಿಗನಾಗಿದ್ದ ಅಖಿಲೇಶ್ ನಿಜಕ್ಕೂ ಯಾರು? ಎಂಬ ನಿಗೂಢತೆ ಹಾಗೆಯೇ ಉಳಿದಿದೆ.
– ವಿಜಯ್ ಹಾನಗಲ್