ಮಡಿಕೇರಿ, ಜೂ. ೨೨: ಭಾರತೀಯ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಒಂದು ಸಾವಿರ ಎಲ್.ಪಿ.ಎಂ. (ಲೀಟರ್ ಪರ್ ಮಿನಿಟ್) ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕದ ಸ್ಥಳವನ್ನು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಪರಿಶೀಲನೆ ಮಾಡಿದರು.ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಅವರಿಗೆ ಕೆಲಸ ಸಮರ್ಪಕವಾಗಿ ಮಾಡುವಂತೆ ಹಾಗೂ ಜುಲೈ ೨ನೇ ವಾರದೊಳಗೆ ಯೋಜನೆ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ತಡವಾಗಬಾರದು. ಉದ್ದೇಶಿತ ಜಾಗದಲ್ಲಿ ಇರುವ ಮರವನ್ನು ಅರಣ್ಯ ಇಲಾಖೆ ಮೂಲಕ ತೆರವು ಮಾಡುವಂತೆ ಸಂಸದರು ಸೂಚಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕೋವಿಡ್ ೨ನೇ ಅಲೆ ಪರಿಸ್ಥಿತಿ ಸೃಷ್ಟಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಆಕ್ಸಿಜನ್ ಸಮಸ್ಯೆ ಎದುರಾಗಿರುವುದನ್ನು ಮನಗಂಡು ೩ನೇ ಅಲೆ ಆರಂಭಕ್ಕೂ ಮುನ್ನ ೧೨೦೦ಕ್ಕೂ ಹೆಚ್ಚು ಕಡೆ ಆಕ್ಸಿಜನ್ ಉತ್ಪಾದನೆ ಮಾಡುವ ಘಟಕಗಳನ್ನು ಸ್ಥಾಪಿಸಬೇಕೆಂಬ ಗುರಿಯನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಗೊಂಡಿದ್ದು, ಕೊಡಗು ಜಿಲ್ಲೆಗೂ ಅನುದಾನ ನೀಡಿದ್ದಾರೆ. ಶಾಸಕರ ಸಲಹೆಯಂತೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲಾಗುತ್ತಿದೆ. ೧ ನಿಮಿಷಕ್ಕೆ ಒಂದು ಸಾವಿರ ಲೀಟರ್ ಆಕ್ಸಿಜನ್ ಅನ್ನು ಇಲ್ಲಿ ಉತ್ಪಾದಿಸಬಹುದಾಗಿದ್ದು, ಯೋಜನೆಗೆ ರೂ ಒಂದೂವರೆ ಕೋಟಿ ವೆಚ್ಚ ತಗುಲಲಿದೆ ಎಂದು ಮಾಹಿತಿ ನೀಡಿದರು.

ಪ್ಲಾಂಟ್ ಅಳವಡಿಕೆಗೂ ಮುನ್ನ ಒಂದು ಕಟ್ಟಡ ನಿರ್ಮಾಣವಾಗಬೇಕಾಗಿದೆ. ಅದಾದ ಬಳಿಕ ಪ್ಲಾಂಟ್ ಅಳವಡಿಸಲಾಗುತ್ತದೆ. ಜುಲೈ ೧೫ರೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ ಅವರು, ಕೊಡಗು ಜಿಲ್ಲೆಯ ಅಗತ್ಯತೆಯನ್ನು ಅರಿತು ಘಟಕ ಸ್ಥಾಪಿಸಲು ಕೇಂದ್ರ ಸರಕಾರ ಅನುದಾನ ನೀಡಿದೆ. ಮೊದಲು ಬಳ್ಳಾರಿಯಿಂದ ಕೊಡಗಿಗೆ ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಇದೀಗ ಆ ಸಮಸ್ಯೆ ದೂರವಾಗಿ ಇಲ್ಲಿಯೆ ಆಕ್ಸಿಜನ್ ಉತ್ಪಾದನೆಯಾಗಲಿದೆ. ಈಗಾಗಲೇ ವೀರಾಜಪೇಟೆಯಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಬೇರೆ ಜಿಲ್ಲೆಗೆ ಆಕ್ಸಿಜನ್ ಪೂರೈಕೆಯ ಬಗ್ಗೆ ಮುಂದಿನ ದಿನದಲ್ಲಿ ಚಿಂತಿಸಲಾಗುವುದು. ನಿಮಿಷಕ್ಕೆ ಒಂದು ಸಾವಿರ ಲೀಟರ್

(ಮೊದಲ ಪುಟದಿಂದ) ಆಕ್ಸಿಜನ್ ಉತ್ಪಾದನೆಯಾಗುವುದರಿಂದ ಕೊಡಗಿಗೆ ಅಗತ್ಯವಿರುವಷ್ಟು ಆಕ್ಸಿಜನ್ ಲಭ್ಯವಾಗಲಿದೆ. ಸೋಮವಾರಪೇಟೆಗೆ ಒಂದು ಪ್ಲಾಂಟ್ ಅಳವಡಿಸಬೇಕಾಗಿದೆ. ಈ ನಿಟ್ಟಿನಲ್ಲಿಯೂ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ಮೆಡಿಕಲ್ ಕಾಲೇಜು ಮುಖ್ಯಸ್ಥ ಡಾ.ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀಕ್ಷಕ ಡಾ. ಮಂಜುನಾಥ್, ಜಿಲ್ಲಾ ಲಸಿಕಾ ಅಧಿಕಾರಿ ಡಾ. ಗೋಪಿನಾಥ್, ಸ್ಥಾನಿಕ ವೈದ್ಯಾಧಿಕಾರಿ ರೂಪೇಶ್ ಗೋಪಾಲ್, ಡಾ.ವಿಶಾಲ್ ಕುಮಾರ್, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿ.ಟಿ.ಶ್ರೀಧರ, ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಅಶೋಕ್ ಇತರರು ಇದ್ದರು.