ಅಧ್ಯಕ್ಷರ ಹೇಳಿಕೆ

ಮಡಿಕೇರಿ, ಜೂ. ೨೨: ‘ಸಿದ್ದಾಪುರ ಗ್ರಾಮ ಪಂಚಾಯಿತಿ ಆಡಳಿತ ಪಕ್ಷದಲ್ಲಿ ಗೊಂದಲ’ ಶೀರ್ಷಿಕೆಯಡಿ ಪ್ರಕಟವಾದ ಮಾಹಿತಿಯಲ್ಲಿ ವಿನಾಕಾರಣ ಸಿದ್ದಾಪುರ ಬಿ.ಜೆ.ಪಿ. ಶಕ್ತಿ ಕೇಂದ್ರದ ಹೆಸರನ್ನು ಎಳೆದುಹಾಕಲಾಗಿದೆ ಎಂದು ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ್ ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ.

ಚರಿತ್ರೆಯಲ್ಲಿ ಮೊದಲ ಬಾರಿಗೆ ಸಿದ್ದಾಪುರ ಪಂಚಾಯಿತಿಯಲ್ಲಿ ಶೂನ್ಯವಾಗಿದ್ದ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ ಕೀರ್ತಿಯನ್ನು ಹೊಂದಿದೆ. ಪಕ್ಷದ ಬೆಂಬಲದೊAದಿಗೆ ೧೫ ಸ್ಥಾನ ಗೆದ್ದು, ಅಧಿಕಾರಕ್ಕೆ ಬಂದು ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಅಡಿಯಲ್ಲಿ ಕಾರ್ಯಕರ್ತರ, ವರಿಷ್ಠರ ಮತ್ತು ಉಳಿದ ಸದಸ್ಯರ ಒಮ್ಮತದ ಅಭಿಪ್ರಾಯದೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಗುಹ್ಯ ವಾರ್ಡ್ನ ತುಳಸಿ ಗಣಪತಿಯನ್ನು ಆಯ್ಕೆ ಮಾಡಲಾಗಿದ್ದು, ಇದೀಗ ನಮ್ಮ ಪಕ್ಷದಲ್ಲಿ ಎರಡು ಗುಂಪು ಇದೆ ಅನ್ನುವುದು ಸರಿಯಲ್ಲ ಎಂದಿದ್ದಾರೆ.

ಪಕ್ಷದ ಕಾರ್ಯಕರ್ತರ ಪೋಸ್ಟರ್ ವಿಚಾರವು ಅವರ ವೈಯಕ್ತಿಕ ವಿಚಾರವಾಗಿದ್ದು, ಎಲ್ಲದಕ್ಕೂ ಪಕ್ಷ ಮೂಗು ತೂರಿಸುವುದಿಲ್ಲ. ನೂತನವಾಗಿ ಆಯ್ಕೆಯಾದ ಸದಸ್ಯೆ ಚುನಾವಣೆ ಸಂದರ್ಭ ಪಕ್ಷಕ್ಕೆ ಬಂದಿದ್ದರಿAದ ಮತ್ತು ಪಕ್ಷದ ತತ್ವ ಸಿದ್ಧಾಂತದ ಅರಿವಿನ ಕೊರತೆಯಿಂದಾಗಿ ಯಾವ ಮುಖಂಡರಿಗೂ ತಿಳಿಸದೆ ಕಾರ್ಯಕರ್ತರ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ. ಇದು ತಿಳಿದ ತಕ್ಷಣವೇ ಶಕ್ತಿ ಕೇಂದ್ರದ ಪ್ರಮುಖರು, ಸಹಪ್ರಮುಖರು, ಕಾರ್ಯಕರ್ತರು ಠಾಣೆಗೆ ತೆರಳಿ ನೂತನ ಸದಸ್ಯೆಗೆ ಪಕ್ಷದ ಕಾರ್ಯಕರ್ತರ ಬಗ್ಗೆ ಆರೋಪ ಮಾಡಬೇಡಿ ಎಂದು ಬುದ್ಧಿವಾದ ಹೇಳಿ ಆಕೆಯ ಮನವೊಲಿಸಿ ಸಮಸ್ಯೆಯನ್ನು ಎಲ್ಲರ ಸಮ್ಮುಖದಲ್ಲಿಯೇ ಇತ್ಯರ್ಥ ಪಡಿಸಲಾಗಿದೆ.

ಬಿಜೆಪಿ ಪಕ್ಷ, ಪಕ್ಷದ ಕೆಲಸ ಮಾತ್ರ ಮಾಡುತ್ತದೆ ಹೊರತು ಪಂಚಾಯಿತಿ ಆಡಳಿತದಲ್ಲಿ ಮೂಗು ತೂರಿಸುವುದಿಲ್ಲ. ಪಂಚಾಯಿತಿಯೊಳಗೆ ರಾಜಕೀಯ ರಹಿತವಾಗಿ ಆಯ್ಕೆಯಾಗಿರುವ ವಿವಿಧ ಪಕ್ಷಗಳ ಬೆಂಬಲಿಗ ಸದಸ್ಯರುಗಳು ಇದ್ದು ಅವರಲ್ಲಿ ಏನಾದರೂ ಗೊಂದಲಗಳಿದ್ದಲ್ಲಿ ಅದಕ್ಕೆ ಬಿಜೆಪಿ ಪಕ್ಷ ಹೊಣೆಯಾಗುವುದಿಲ್ಲ ಎಂದು ಪ್ರವೀಣ್ ಸ್ಪಷ್ಟೀಕರಣ ನೀಡಿದ್ದಾರೆ.