ವೀರಾಜಪೇಟೆ, ಜೂ. ೧೯: ದೇಶದ ಯಾವುದೇ ಪ್ರಜೆಗಾದರೂ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಇಲ್ಲ; ಪೊಲೀಸ್ ಇಲಾಖೆ ಏನೇ ಸಮರ್ಥನೆ ಮಾಡಿಕೊಂಡರೂ ಮಾನಸಿಕ ಅಸ್ವಸ್ಥನ ಮೇಲೆ ಅಮಾನುಷವಾಗಿ ನಡೆದುಕೊಂಡ ರೀತಿ ಒಪ್ಪುವಂತದಲ್ಲ ಇದನ್ನು ತೀವ್ರವಾಗಿ ಖಂಡಿಸಿದ್ದೇನೆ. ಇಂತಹ ಘಟನೆಗಳನ್ನು ಮುಂದೆಯು ಖಂಡಿಸುತ್ತೇನೆ. ಈ ವಿಚಾರದಲ್ಲಿ ಕೂಲಂಕುಶ ತನಿಖೆ ನಡೆಸುವಂತೆ ಪೊಲೀಸ್ ಮೇಲಾಧಿಕಾರಿಗಳ ಜತೆ ಚರ್ಚಿಸಿದ್ದೇನೆ ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿ, ಘಟನೆ ನಡೆದ ದಿನದಂದೇ ಮಾಹಿತಿ ಲಭ್ಯವಾಗಿದೆ. ಅದೇ ದಿನ ರಾಯ್ ಡಿಸೋಜಾ ಅವರ ಪೋಷಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಾಂತ್ವನ ಹೇಳಿದ್ದೇನೆ. ಅವರ ಮರಣೋತ್ತರ ಪರಿಕ್ಷೇಯನ್ನು ಕೂಡಲೇ ನಡೆಸುವಂತೆ ವೈದ್ಯರಿಗೂ ನಿರ್ದೇಶನ ನೀಡಿದ್ದೆ. ಪೊಲೀಸರು ಉದ್ದೇಶಪೂರ್ವಕವಾಗಿ ಮಾಡಿದರೋ, ಲಾಕಪ್ ಒಳಗೆ ಆಗಿದಿಯೋ ಅದು ವಿಚಾರವಲ್ಲ. ಯಾವುದೇ ಕಾರಣಕ್ಕೂ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಮೇಯವೇ ಇಲ್ಲ. ಮಾನಸಿಕ ಅಸ್ವಸ್ಥನಾದರೂ ಕುಟುಂಬ ವರ್ಗಕ್ಕೆ ನೋವು ಇದ್ದೇ ಇರುತ್ತದೆ. ಅವರ ನೋವಿನೊಂದಿಗೆ ತಾವು ಕೂಡ ಭಾಗಿಯಾಗುತ್ತೇನೆ. ಸಿ.ಐ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಅವರ ಕುಟುಂಬ ವರ್ಗಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದು ಹೇಳಿದರು.