ಮಡಿಕೇರಿ, ಜೂ. ೧೫: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಶೇ.೫ ಕ್ಕಿಂತ ಕಡಿಮೆಗೊಂಡಿದ್ದು, ಪ್ರತಿ ದಿನ ೧೦೦ ಕ್ಕಿಂತ ಅಧಿಕ ಸಂಖ್ಯೆಯಲ್ಲಿ ದೃಢವಾಗುತ್ತಿದ್ದ ಕೋವಿಡ್ ಪ್ರಕರಣಗಳು ಇದೀಗ ೨ ಅಂಕಿಗಿಳಿದಿವೆ. ತಾ.೧೩ ರಂದು ಶೇ.೪.೬ ಪಾಸಿಟಿವಿಟಿ ರೇಟ್ನೊಂದಿಗೆ ೮೯ ಹೊಸ ಪ್ರಕರಣಗಳು ದಾಖಲಾಗಿದ್ದು, ತಾ.೧೫ ರಂದು ಶೇ.೩.೯ ಪಾಸಿಟಿವಿಟಿ ದಾಖಲಾಗಿದ್ದು ೫೯ ಹೊಸ ಪ್ರಕರಣಗಳು ದೃಢಪಟ್ಟಿವೆ. ಇಂದಿನ ಪಾಸಿಟಿವಿಟಿ ರೇಟ್ ಆಧಾರದಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆಗಳ ಸಂಖ್ಯೆ ೧,೫೧೩ ಎಂದು ತಿಳಿದುಬಂದಿದೆ. ಒಟ್ಟು ೧,೫೧೩ ಮಾದರಿಗಳಲ್ಲಿ ಕೇವಲ ೫೯ (ಅಂದರೆ: ೧೦೦ ಮಾದರಿಗಳಲ್ಲಿ ೩.೯ ಮಾದರಿಗಳಲ್ಲಿ ಮಾತ್ರ ಸೋಂಕು) ಮಾದರಿಗಳಲ್ಲಿ ಮಾತ್ರ ಕೋವಿಡ್ ದೃಢಪಟ್ಟಿರುವುದು ಜಿಲ್ಲೆಯ ಜನತೆ ನಿಟ್ಟುಸಿರುಬಿಡುವಂತಾಗಿದೆ.
ಜಿಲ್ಲೆಯಲ್ಲಿ ತಾ.೧೫ ರಂದು ೫೯ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಮಡಿಕೇರಿಯಲ್ಲಿ ೧೬, ಸೋಮವಾರಪೇಟೆಯಲ್ಲಿ ೩೫ ಹಾಗೂ ವೀರಾಜಪೇಟೆಯಲ್ಲಿ ೮ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಇಬ್ಬರು ಮೃತಪಟ್ಟಿದ್ದು, ೧೯೬ ಮಂದಿ ಬಿಡುಗಡೆಗೊಂಡಿದ್ದಾರೆ.
ಇದುವರೆಗೆ ೨೭,೩೩೨ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ೨೫,೪೨೫ ಮಂದಿ ಬಿಡುಗಡೆಗೊಂಡಿದ್ದಾರೆ. ೧,೫೫೬ ಮಂದಿ ಗುಣಮುಖರಾಗಿದ್ದು, ೩೫೧ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.