ಮಿಸ್ ಕನೆಟಿಕಟ್ ಆದ ಕೊಡಗಿನ ಯುವತಿ

ಮಡಿಕೇರಿ, ಜೂ. ೧೬: ಅಮೇರಿಕಾದಲ್ಲಿರುವ ಭಾರತದ ಸಂಜಾತೆ ಕೊಡಗು ಮೂಲದವರಾದ ನಿಕಿತಾ ಕೀಕಣಮಾಡ ಅವರು ಇತ್ತೀಚೆಗೆ ಅಲ್ಲಿನ ಕನೆಟಿಕಟ್‌ನಲ್ಲಿ ನಡೆದ ಮಿಸ್ ಕನೆಟಿಕಟ್ ಟೀನ್ ಸ್ಪರ್ಧೆಯಲ್ಲಿ ಮೊದಲಿಗರಾಗಿ ಹೊರಹೊಮ್ಮುವ ಮೂಲಕ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದರೊAದಿಗೆ ನಿಕಿತಾ ನವೆಂಬರ್ ೨೭ ರಂದು ನಡೆಯಲಿರುವ ಮಿಸ್ ಯು.ಎಸ್.ಎ. (ಟೀನ್) ಸ್ಪರ್ಧೆಯಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಮೂಲತಃ ಬಿರುನಾಣಿಯ ಕೀಕಣಮಾಡ ಸುಬ್ರಮಣಿ (ಸುಗುಣ) ಹಾಗೂ ಡಾ. ಪ್ರೀತಿ ಅವರ ಪುತ್ರಿಯಾಗಿರುವ ನಿಕಿತಾ ಇತ್ತೀಚೆಗೆ ನಡೆದ ಮಿಸ್ ಕನೆಟಿಕಟ್ ಸ್ಪರ್ಧೆಯಲ್ಲಿ ವಿವಿಧ ಸುತ್ತುಗಳಲ್ಲಿ ಉತ್ತಮ ಸಾಧನೆ ಹಾಗೂ ಉತ್ತರಗಳ ಮೂಲಕ ಗಮನ ಸೆಳೆದು ಪ್ರಥಮ ಸ್ಥಾನದ ಕಿರೀಟಕ್ಕೆ ಭಾಜನರಾಗಿದ್ದಾರೆ. ಇವರ ತಾಯಿ ಡಾ. ಪ್ರೀತಿ ಅವರು ಕಳೆದ ವರ್ಷ ಯು.ಎಸ್.ಎ.ಯಲ್ಲಿ ಕೋವಿಡ್ ಸೋಂಕಿತರ ಆರೈಕೆಯಲ್ಲಿ ತೋರಿದ ಸೇವೆಗಾಗಿ ಅಲ್ಲಿ ವಿಶೇಷವಾದ ಗೌರವವನ್ನು ಪಡೆದಿದ್ದರು.

ಇದೀಗ ಪುತ್ರಿ ನಿಕಿತಾ ಈ ಸಾಧನೆ ತೋರಿದ್ದು ಮುಂದಿನ ನವೆಂಬರ್‌ನಲ್ಲಿ ಯು.ಎಸ್.ಎ.ಯ ತುಲ್ಸಾದ ಓಕ್ಲದಲ್ಲಿ ನಡೆಯುವ ಮಿಸ್ ಯು.ಎಸ್.ಎ. (ಟೀನ್) ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಈಕೆ ಕೊಡಗಿನಿಂದ ಕರ್ನಾಟಕ ರಾಜ್ಯ ರಣಜಿ ತಂಡವನ್ನು ಪ್ರಥಮವಾಗಿ ಪ್ರತಿನಿಧಿಸಿರುವ ಮುಂಡAಡ ರಾಜಪ್ಪ ಹಾಗೂ ಜಯಂತಿ ದಂಪತಿಯ ಮೊಮ್ಮಗಳು.