ಕಣಿವೆ, ಜೂ. ೧೫: ಒಂದೆಡೆ ಮನೆಯೊಳಗೆ ತಿನ್ನುವ ಅನ್ನದ ತಟ್ಟೆಗೆ ಮುತ್ತಿಕೊಳ್ಳುವ ನೊಣಗಳ ರಾಶಿ, ಇನ್ನೊಂದೆಡೆ ಮನೆಯಂಗಳಕ್ಕೆ ಕಾಗೆಗಳು ತಂದು ಬಿಸಾಡುವ ಮೂಳೆ ಮಾಂಸದ ತ್ಯಾಜ್ಯಗಳ ರಾಶಿ, ಮತ್ತೊಂದೆಡೆ ಮನೆಯಂಗಳದಲ್ಲಿ ಸಾಕುವ ಕೋಳಿ-ಕುರಿಗಳನ್ನು ಹೊತ್ತೊಯ್ಯುವ ನಾಯಿಗಳ ಹಾವಳಿ..!

ನಾಲ್ಕು ಗೋಡೆಗಳ ಒಳಗಿನ ಮನೆಯೊಳಗಿದ್ದರೂ ಮೂಗು ಮುಚ್ಚಿಯೇ ಬದುಕಬೇಕಾದ ದುರವಸ್ಥೆಯಲ್ಲಿ ದಿನಗಳೆಯುತ್ತಿರುವ ಈ ಜನರ ರೋದನ ಕಳೆದ ಹತ್ತು ವರ್ಷಗಳಿಂದಲೂ ಒಂದು ರೀತಿಯಲ್ಲಿ ಆಳುವವರಿಗೆ ಕೇಳಿಸದ ಅರಣ್ಯರೋದನದಂತಾಗಿದೆ. ಅಷ್ಟಕ್ಕೂ ಬವಣೆಗಳೊಳಗೆ ಬದುಕುತ್ತಿರುವ ಈ ಜನರು ಇರುವ ಗ್ರಾಮ ಭುವನಗಿರಿ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಈ ಗ್ರಾಮದ ಜನವಸತಿ ಪ್ರದೇಶದಲ್ಲಿನ ಏಳು ಎಕರೆ ಜಾಗದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಲ್ಲಿನ ಜನವಸತಿ ಪ್ರದೇಶಗಳಲ್ಲಿ ನಿತ್ಯವೂ ಸಂಗ್ರಹವಾಗುವ ಕಸದ ತ್ಯಾಜ್ಯವನ್ನು ಟ್ರಾö್ಯಕ್ಟರ್ ಹಾಗೂ ಟಿಪ್ಪರ್‌ಗಳಲ್ಲಿ ತಂದು ಸುರಿಯುತ್ತಿದೆ.

ಆದರೆ ವೈಜ್ಞಾನಿಕ ಪದ್ಧತಿಯಲ್ಲಿ ಕಸ ತ್ಯಾಜ್ಯವನ್ನು ನಿರ್ವಹಣೆ ಮಾಡದೇ ಇರುವುದರಿಂದ ಇಲ್ಲಿಗೆ ತಂದು ಹಾಕುವ ಕಸ ರಾಶಿ ರಾಶಿಯಾಗಿ ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹರಡಿದೆ. ಈಗ ಮಳೆ ಬೇರೆ ಸುರಿಯುತ್ತಿರುವುದರಿಂದ ಕೊಳೆತ ಕಸ ವಿಪರೀತ ದುರ್ವಾಸನೆ ಬೀರುತ್ತಿದ್ದು ಇಲ್ಲಿನ ನಿವಾಸಿಗಳು ಒಂದು ರೀತಿಯಲ್ಲಿ ಸಂಕಷ್ಟದ ಸಂಕೋಲೆಯಲ್ಲಿ ದಿನಕಳೆಯುತ್ತಿದ್ದಾರೆ.

ಜನಹಿತ ಮರೆತ ಕೂಡಿಗೆ ಪಂಚಾಯಿತಿ

ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳ ಹಿತ ಕಾಯಬೇಕಾದ ಸ್ಥಳೀಯ ಕೂಡಿಗೆ ಗ್ರಾಮ ಪಂಚಾಯಿತಿ ಆಡಳಿತ, ಈ ಕಸದ ರಾಶಿಯ ಆಸುಪಾಸಿನಲ್ಲಿ ನೆಲೆಸಿರುವ ನಿವಾಸಿಗಳ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಸರಿಯಾಗಿ ಕಸವನ್ನು ನಿರ್ವಹಣೆ ಮಾಡದೇ ಬೇಜವಾಬ್ದಾರಿ ಯಿಂದ ವರ್ತಿಸುತ್ತಿರುವ ಕುಶಾಲನಗರ ಪಟ್ಟಣ ಪಂಚಾಯಿತಿಗೆ ಕೊನೆ ಪಕ್ಷ ಈ ಕೂಡಿಗೆ ಗ್ರಾಮ ಪಂಚಾಯಿತಿ ನೋಟೀಸ್ ನೀಡಿ ಎಚ್ಚರಿಸಬೇಕಿದೆ.

ಡಿಸಿ ಭೇಟಿಗೆ ಆಗ್ರಹ: ಕುಶಾಲನಗರದ ಕಸದ ರಾಶಿಯ ಅವ್ಯವಸ್ಥೆಯಿಂದ ನಮಗಾಗುತ್ತಿರುವ ಸಮಸ್ಯೆಯನ್ನು ಖುದ್ದು ಪರಿಶೀಲಿಸಿ ಶಾಶ್ವತವಾದ ಮಾರ್ಗೋಪಾಯ ಗಳನ್ನು ಕರುಣಿಸಲು ಸ್ವತಃ ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಆಗಮಿಸ ಬೇಕು ಎಂದು ಪಟ್ಟು ಹಿಡಿದಿರುವ ಸ್ಥಳೀಯ ನಿವಾಸಿಗಳು ಡಿಸಿ ಬರಲಿಲ್ಲವಾದರೆ ನಾವುಗಳೇ ಡಿಸಿ ಮನೆ ಬಳಿ ಹೋಗ್ತೇವೆ ಎಂದು ನೊಂದ ನಿವಾಸಿ ಸುರೇಶ್ ಹೇಳಿದರು.

ಕಣ್ಣು - ಮೂಗು ಇಲ್ಲದ ಪಂಚಾಯಿತಿ

ನಮ್ಮೂರಲ್ಲಿ ನಮ್ಮ ಮನೆ ಪಕ್ಕ ಕಸದ ಘಟಕ ಮಾಡಿ ಹತ್ತು ವರ್ಷಗಳು ಕಳೆದರೂ ಕೂಡ ಸ್ಥಳೀಯ ಗ್ರಾಮ ನಿವಾಸಿಗಳಿಗೆ ಯಾವುದೇ ಅನಾನುಕೂಲ ವಾಗದಂತೆ ಸರಿಯಾದ ವೈಜ್ಞಾನಿಕ ಕ್ರಮದಲ್ಲಿ ಕಸವನ್ನು ನಿರ್ವಹಿಸಬೇಕಿದ್ದರೂ ಕೂಡ ಇದೂವರೆಗೆ ಏಕೆ ಸಾಧ್ಯವಾಗಿಲ್ಲ ಎಂದು ಇಲ್ಲಿನ ನಿವಾಸಿಗಳಾದ ಶಿವರಾಂ, ಧರ್ಮ, ಕೃಷ್ಣ, ಮೇಘನಾ, ಶಾಶ್ವತ, ರಂಗಯ್ಯ ಮೊದಲಾದವರು ಪ್ರಶ್ನಿಸುತ್ತಿದ್ದಾರೆ.

ತಿಂಗಳಿಗೆ ೧೫೦೦ ರೂ. ಅಪವ್ಯಯ

ಕಸದ ರಾಶಿಯ ಘಟಕದ ತಡೆಗೋಡೆ ಬಳಿ ವಾಸವಿರುವ ಬಡ ರೈತ ಸುರೇಶ ಎಂಬವರು, ಮನೆ ಯೊಳಗೆ ನುಸುಳುವ ನೊಣಗಳನ್ನು ನಿಯಂತ್ರಿಸಲು ಮನೆಯ ಬಾಗಿಲಿಗೆ ನೊಣಗಳ ತಡೆಗೆ ರಸಾಯನಿಕದ ಪ್ಲಾಸ್ಟಿಕ್ ದಾರಗಳನ್ನು ತೂಗಿ ಹಾಕುತ್ತಾರೆ. ಅದರ ಮೇಲೆ ಕೂರುವ ನೊಣ ಅಲ್ಲೇ ಸಾಯುತ್ತವೆ. ಉಳಿದಂತೆ ನೇರ ಒಳ ನುಸುಳುವ ನೊಣಗಳು ಆಹಾರ ಪದಾರ್ಥಗಳ ಮೇಲೆ ಬಟ್ಟೆಗಳ ಮೇಲೆ ಕುಳಿತುಕೊಳ್ಳುತ್ತವೆ. ‘ಏನು ಮಾಡೋದು ಹೇಳಿ ಹಾಲಿನ ದುಡ್ಡಿನ ೧೫೦೦ ರೂ.ಗಳನ್ನು ಈ ದಾರಕ್ಕೆ ವ್ಯಯ ಮಾಡ್ತಾ ಇದ್ದೇನೆ. ಕೊನೆ ಪಕ್ಷ ಪಂಚಾಯಿತಿಯವರು ಈ ದಾರದ ಬಂಡಲ್‌ಗೆ ವ್ಯಯಿಸುವ ಹಣವಾದರೂ ಕೊಟ್ಟರೆ ಸಾಕು. ಅದನ್ನೂ ಕೊಡಲ್ಲ ಅಂತಾರೆ’ ಎಂದು ನೊಂದು ನುಡಿಯುತ್ತಾರೆ ಸುರೇಶ.

ಸಾಂಕ್ರಾಮಿಕ ಹರಡುವ ಭೀತಿ

ಸರಿಸುಮಾರು ೨೦ ಸಾವಿರ ಜನಸಂಖ್ಯೆಯುಳ್ಳ ಕುಶಾಲನಗರ ಪಟ್ಟಣದ ಮೂವತ್ತಕ್ಕೂ ಅಧಿಕ ಬಡಾವಣೆಗಳಿಂದ ನಿತ್ಯವೂ ಸಂಗ್ರಹವಾಗುವ ಏಳೆಂಟು ಟ್ರಾö್ಯಕ್ಟರ್ ಕಸ ತ್ಯಾಜ್ಯವನ್ನು ಪ್ರತಿ ದಿನ ತಂದು ಸುರಿಯುವ ಪಟ್ಟಣ ಪಂಚಾಯಿತಿಯ ಬೇಜವಾಬ್ದಾರಿಯಿಂದ ಇಲ್ಲಿನ ಕಸದ ರಾಶಿ ಕೊಳೆತು ಗಾಳಿಯಲ್ಲಿ ಸಾಂಕ್ರಾಮಿಕ ರೋಗ ಸುತ್ತಲಿನ ಕಣಿವೆ, ಭುವನಗಿರಿ, ಸೀಗೆಹೊಸೂರು ಗ್ರಾಮಗಳಿಗೆ ಹರಡಿದರೂ ಅಚ್ಚರಿಪಡಬೇಕಿಲ್ಲ.

ಕೋಟಿಗಟ್ಟಲೆ ಹಣ ಅಪ್ರಯೋಜಕ

ಕಸ ತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಿಸಿದ ಕಳೆದ ಹತ್ತು ವರ್ಷಗಳಿಂದಲೂ ಕೋಟ್ಯಂತರ ರೂ.ಗಳನ್ನು ಇಲ್ಲಿ ವ್ಯಯಿಸಲಾ ಗಿದ್ದರೂ ಕೂಡ ಇಲ್ಲಿನ ಗ್ರಾಮ ನಿವಾಸಿಗಳಿಗಂತೂ ಬಿಡಿಗಾಸಿನ ಅನುಕೂಲವಾಗಿಲ್ಲ.

ಘಟಕದ ಆವರಣದಲ್ಲಿ ಒಣ ಕಸ ಹಾಗು ಹಸಿ ಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸುವುದಾಗಿ ಹೇಳಿ ವಿಶಾಲವಾದ ಶೆಡ್ ನಿರ್ಮಾಣ ಮಾಡಿ ಹತ್ತು ವರ್ಷ ಕಳೆದರೂ ಕೂಡ ಅದರೊಳಗೆ ಯಾವುದೇ ಕಸದ ಯಂತ್ರಗಳನ್ನು ಅಳವಡಿಸಲು ಪಂಚಾಯಿತಿಗೆ ಇದುವರೆಗೆ ಏಕೆ ಸಾಧ್ಯವಾಗಿಲ್ಲ ಎಂಬುದು ಯಕ್ಷ ಪ್ರಶ್ನೆ.

ಕೂಡಲೇ ಕುಶಾಲನಗರ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ ಜಯವರ್ಧನ ಅವರು ಈ ಘಟಕದ ಆವರಣಕ್ಕೆ ಭೇಟಿ ನೀಡಬೇಕು. ಕಸದ ಅಸಮರ್ಪಕ ನಿರ್ವಹಣೆಯಿಂದ ಸ್ಥಳೀಯ ಮಂದಿಗೆ ಆಗುತ್ತಿರುವ ಅನಾನುಕೂಲವನ್ನು ಅರಿತು, ಅದರ ನಿರ್ಮೂಲನೆಗೆ ಪ್ರಾಮಾಣಿಕವಾಗಿ ಪಣತೊಡಬೇಕೆಂದು ಸ್ಥಳೀಯ ನಿವಾಸಿ ಕೆ.ಸಿ. ನಂಜುAಡಸ್ವಾಮಿ ಒತ್ತಾಯಿಸಿದ್ದಾರೆ.

ಈ ಹಿಂದಿನಿAದಲೂ ಇಲ್ಲಿನ ಕಸದ ಸಮಸ್ಯೆಯ ನಿಗ್ರಹಕ್ಕೆ ಗಮನ ಹರಿಸಬೇಕೆಂದು ಒತ್ತಾಯಿಸಿ ಕುಶಾಲನಗರದಿಂದ ಕಸವನ್ನು ತರುವ ಟ್ರಾö್ಯಕ್ಟರ್‌ಗಳನ್ನೆಲ್ಲ ತಡೆದು ತಡೆದೂ ಸಾಕಾಗಿದೆ. ಯಾವುದೇ ಪ್ರಯೋಜನವಾಗ್ತಿಲ್ಲ. ಸ್ಥಳೀಯ ಶಾಸಕರಾದ ಅಪ್ಪಚ್ವು ರಂಜನ್ ಅವರು ಒಮ್ಮೆ ಈ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ನಂಜುAಡಸ್ವಾಮಿ ಆಗ್ರಹಿಸಿದ್ದಾರೆ.

ವರದಿ: ಕೆ.ಎಸ್. ಮೂರ್ತಿ