ಕುಶಾಲನಗರ, ಜೂ. ೧೫: ಕುಶಾಲನಗರ ಕಾವೇರಿ ನದಿ ತೀರದಲ್ಲಿ ಈ ಸಾಲಿನಲ್ಲಿ ಒಂದು ಸಾವಿರ ಗಿಡ ನೆಡುವ ಯೋಜನೆಗೆ ಭಾನುವಾರ ಚಾಲನೆ ನೀಡಲಾಯಿತು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ಆಶ್ರಯದಲ್ಲಿ ಅರಣ್ಯ ಇಲಾಖೆ, ಪಟ್ಟಣ ಪಂಚಾಯಿತಿ ಮತ್ತು ನದಿ ತೀರದ ಬಡಾವಣೆಯ ಪ್ರಮುಖರ ಸಹಯೋಗದೊಂದಿಗೆ ಪಟ್ಟಣದ ರಸೂಲ್ ಬಡಾವಣೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ಮತ್ತು ಉದ್ಯಮಿ ಪುರುಷೋತ್ತಮ ರೈ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್, ಪಟ್ಟಣದ ಹಸಿರೀಕರಣ ಜೊತೆಗೆ ನದಿ ತೀರದಲ್ಲಿ ಗಿಡ ನೆಡುವ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು. ನದಿ ತೀರದಲ್ಲಿ ಈ ಸಾಲಿನಲ್ಲಿ ಬಿದಿರು, ಮೇಪ್ಲವರ್, ಹೊಂಗೆ, ಮಾವು ಮತ್ತಿತರ ಗಿಡಗಳು ಸೇರಿದಂತೆ ಅಂದಾಜು ಒಂದು ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಎಂ.ಎನ್. ಚಂದ್ರ ಮೋಹನ್ ತಿಳಿಸಿದರು. ಕೂಡಾ ಅಧ್ಯಕ್ಷ ಎಂ.ಎA. ಚರಣ್, ಉದ್ಯಮಿ ಪುರುಷೋತ್ತಮ ರೈ ಕಾರ್ಯಕ್ರಮಕ್ಕೆ ಸಹಕರಿಸುವ ಭರವಸೆಯೊಂದಿಗೆ ಶುಭ ಹಾರೈಸಿದರು.

ಜುಲೈ ಅಂತ್ಯದೊಳಗೆ ನದಿ ತಟದ ಬಡಾವಣೆಗಳಲ್ಲಿ ಗಿಡ ನೆಡುವ ಯೋಜನೆ ಪೂರ್ಣಗೊಳ್ಳಲಿದೆ ಎಂದು ವೇದಿಕೆಯ ಉಪಾಧ್ಯಕ್ಷ ತೋರೆರ ಉದಯ್ ಕುಮಾರ್ ಮಾಹಿತಿ ನೀಡಿದರು.

ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್, ಕುಡ ಅಧ್ಯಕ್ಷ ಎಂ.ಎA. ಚರಣ್, ಗುತ್ತಿಗೆದಾರ ಪುರುಷೋತ್ತಮ ರೈ ಮತ್ತು ಬಡಾವಣೆಯ ಪ್ರಮುಖ ಅಮ್ಜದ್ ಹುಸೇನ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆ ಪ್ರಮುಖರಾದ ಕೊಡಗನ ಹರ್ಷ, ರಸೂಲ್ ಬಡಾವಣೆಯ ನಿವಾಸಿಗಳು ಇದ್ದರು.