ವೀರಾಜಪೇಟೆ, ಜೂ. ೧೫: ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸಂಪೂರ್ಣ ಹತೋಟಿಯಲ್ಲಿದ್ದು, ಕೊರೊನಾ ಮುಕ್ತ ಗ್ರಾಮವಾಗಿದೆ ಎಂದು ಬೇಟೋಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ ತಿಳಿಸಿದ್ದಾರೆ.
ಬೇಟೋಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಟಾಸ್ಕ್ಫೋರ್ಸ್ ಸಭೆಯಲ್ಲಿ ಮಾತನಾಡಿ, ಕೊರೊನಾ ಎರಡನೇ ಅಲೆಯಲ್ಲಿ ೬೩ ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಕೊರೊನಾವನ್ನು ತಡೆಗಟ್ಟಲು ಆಯುಷ್ ಇಲಾಖೆಯಿಂದ ರೋಗ ನಿರೋಧಕ ಮಾತ್ರೆಗಳನ್ನು ನೀಡಲಾಗಿದ್ದು, ಪ್ರತಿ ಅಂಗನವಾಡಿಯಲ್ಲಿ ಕುಟುಂಬದ ಮುಖ್ಯಸ್ಥರ ಸಹಿ ಪಡೆದುಕೊಂಡು ನೀಡಲಾಗುವುದು. ಪ್ರತಿ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿಗಳು, ಪಂಚಾಯಿತಿ ಸದಸ್ಯರುಗಳು ಮತ್ತು ಸಿಬ್ಬಂದಿಗಳ ಸೇವೆ ಶ್ಲಾಘನೀಯ. ವಿಶೇಷತೆ ಎಂದರೆ ಮಾಕುಟ್ಟ ಗ್ರಾಮದಲ್ಲಿ ಕಳೆದೆರಡು ವರ್ಷದಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಒಂದು ತಿಂಗಳ ಗೌರವಧನವನ್ನು ಕೊರೊನಾ ನಿಯಂತ್ರಣಕ್ಕಾಗಿ ನೀಡಿದ್ದಾರೆ. ಪಂಚಾಯಿತಿಯಿAದ ೫೦೦ ರೂ.ಗಳನ್ನು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಪ್ರಯಾಣ ಭತ್ಯೆಯಾಗಿ ನೀಡಲಾಗುವುದು. ಗ್ರಾಮದಲ್ಲಿ ಯಾರಿಗಾದರೂ ಪಾಸಿಟಿವ್ ಬಂದರೆ ಅಂತವರನ್ನು ನೇರವಾಗಿ ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸಲಾಗುವುದು ಎಂದು ಹೇಳಿದರು.
ಸದಸ್ಯ ಅಚ್ಚಪಂಡ ದಿನೇಶ್ ಮಾತನಾಡಿ, ಧರ್ಮಸ್ಥಳ ಹಾಗೂ ವಿವಿಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಗ್ರಾಮಗಳಲ್ಲಿ ಕಂತಿನ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಆ ಸಂದರ್ಭದಲ್ಲಿ ಹೆಚ್ಚಿನ ಜನರು ಸೇರ್ಪಡೆಗೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದರು. ಸರ್ಕಾರದ ಸ್ಪಷ್ಟ ಆದೇಶ ಇರುವುದರಿಂದ ಲಾಕ್ಡೌನ್ ಮುಗಿಯುವವರೆಗೆ ಯಾರೂ ಗುಂಪು ಸೇರುವಂತಿಲ್ಲ. ಹಣ ವಸೂಲಿ ಮಾಡುವಂತಿಲ್ಲ. ಅಂತಹ ಪ್ರಕರಣ ಕಂಡು ಬಂದರೆ ಗಮನಕ್ಕೆ ತನ್ನಿ ಎಂದು ಪಿ.ಡಿ.ಓ. ಮಣಿ ಸಭೆಗೆ ತಿಳಿಸಿದರು.
‘ಸರ್ ನಾವು ಹಗಲು-ರಾತ್ರಿ ಎನ್ನದೆ ಕೋವಿಡ್ ಕೆಲಸ ನಿರ್ವಹಿಸಿದ್ದೇವೆ. ಒಂದು ರೋಗಿಯನ್ನು ವಾಹನದಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಬಿಟ್ಟು ಬಂದರೆ ನಿಮಗೆಷ್ಟು ಕಮಿಷನ್ ಕೊಡುತ್ತಾರೆ ಎಂದು ಕೇಳುತ್ತಾರೆ. ಲಸಿಕಾ ಕೇಂದ್ರದಲ್ಲಿ ಕೆಲಸ ನಿರ್ವಹಿಸಿದರೂ ನಿಮಗೆಷ್ಟು ಹಣ ನೀಡುತ್ತಾರೆ’ ಎಂದು ನಮ್ಮನ್ನು ನಿಂದಿಸುತ್ತಾರೆ ಎಂದು ಆಶಾ ಕಾರ್ಯಕರ್ತರು ತಮ್ಮ ಅಳಲನ್ನು ತೋಡಿಕೊಂಡರು.
ಪAಚಾಯಿತಿ ಅಧ್ಯಕ್ಷೆ ಯಶೋಧ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾಂತಿ, ಆಶಾ, ಅಂಗನವಾಡಿ, ಆರೋಗ್ಯ ಸಿಬ್ಬಂದಿಗಳು, ರೆವಿನ್ಯೂ ಇಲಾಖಾ ಅಧಿಕಾರಿಗಳು ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.