ಸೋಮವಾರಪೇಟೆ,ಜೂ.೧೬: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟಗೊಳಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸರು, ಜಾನುವಾರುಗಳ ಸಹಿತ ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ತಾಲೂಕಿನ ಕೂತಿ ಗ್ರಾಮದಿಂದ ಅಕ್ರಮವಾಗಿ ೪ ಜಾನುವಾರುಗಳನ್ನು ಅಶೋಕ ಲೈಲ್ಯಾಂಡ್(ಕೆ.ಎ.೧೨ ಎ.೭೮೮೬) ವಾಹನದಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಾಟಗೊಳಿಸುತ್ತಿದ್ದ ಸಂದರ್ಭ, ಸಮೀಪದ ಗೆಜ್ಜೆಹಣಕೋಡು ಗ್ರಾಮದಲ್ಲಿ ಪೊಲೀಸರು ತಡೆಯೊಡ್ಡಿದ್ದಾರೆ.
ಅರಕಲಗೂಡು ತಾಲೂಕಿನ ಹೊಳಲಗೋಡು ನಿವಾಸಿಗಳಾದ ಅಂಜಲ್ಖಾನ್, ಇಮ್ರಾನ್ಪಾಷಾ ಅವರುಗಳನ್ನು ವಶಕ್ಕೆ ಪಡೆದು, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಎಂ.ಸಿ. ಶ್ರೀಧರ್, ಸಿಬ್ಬಂದಿಗಳಾದ ನವೀನ್, ಪ್ರವೀಣ್, ಬಸಪ್ಪ, ಶಿವಕುಮಾರ್ ಅವರುಗಳು ಭಾಗವಹಿಸಿದ್ದರು.