(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಜೂ. ೧೫: ಕೊರೊನಾ ಎರಡನೇ ಅಲೆ ಪ್ರಾರಂಭವಾದ ದಿನದಿಂದಲೂ ಇದನ್ನು ಹತೋಟಿಗೆ ತರಲು ಗೋಣಿಕೊಪ್ಪ ಗ್ರಾಮ ಪಂಚಾಯತಿ ಇನ್ನಿಲ್ಲದ ಪ್ರಯತ್ನ ಮಾಡುತ್ತಲೆ ಬಂದಿದೆ.
ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಹೊರ ಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ವಾಣಿಜ್ಯ ನಗರಕ್ಕೆ ಆಗಮಿಸುತ್ತಾರೆ.
ಅಲ್ಲದೆ ವ್ಯಾಪಾರ ವಹಿವಾಟುವಿನ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇದರಿಂದಾಗಿ ಸಹಜವಾಗಿಯೇ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿವೆ.
ನಗರಕ್ಕೆ ವಿವಿಧ ರಾಜ್ಯ,ಹಾಗೂ ಅಂತರರಾಜ್ಯದಿAದಲೂ ಆಗಮಿಸಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.
ಪ್ರಮುಖ ವಾಣಿಜ್ಯ ನಗರವಾಗಿರುವುದರಿಂದ ಲಾಕ್ಡೌನ್ ಸಡಿಲಗೊಂಡ ಸಂದರ್ಭ ಹೆಚ್ಚಾಗಿ ಜನರು ನಗರಕ್ಕೆ ಆಗಮಿಸಿ ತಮಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ತೆರಳುತ್ತಾರೆ. ಹೀಗಾಗಿ ವಾಣಿಜ್ಯ ನಗರ ಗೋಣಿಕೊಪ್ಪವನ್ನು ಕೊರೊನಾ ಮುಕ್ತ ನಗರವನ್ನಾಗಿ ಮಾರ್ಪಾಡಿಸವುದು ಸುಲಭದ ಮಾತಲ್ಲ.
ಪಂಚಾಯಿತಿಯಲ್ಲಿ ಆಡಳಿತ ಮಂಡಳಿ ಇಲ್ಲದಿರುವುದರಿಂದ ಸಹಜವಾಗಿಯೇ ಪಿಡಿಓ ಹಾಗೂ ಪಂಚಾಯಿತಿ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಆರಿಸಿ ಬಂದಿರುವ ಸದಸ್ಯರನ್ನು ವಿಶ್ವಾಸಕ್ಕೆ ಪಡೆದಿರುವ ಪಿಡಿಒ ತಿಮ್ಮಯ್ಯ ಕೊರೊನಾ ಮುಕ್ತ ಪಂಚಾಯಿತಿ ಮಾಡಲು ಸಹಕಾರ ಕೋರಿದ್ದಾರೆ.ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಸಮ್ಮುಖದಲ್ಲಿ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ, ಟಾಸ್ಕ್ಫೋರ್ಸ್ ಸಭೆ ನಡೆಸಿ ಹಲವಾರು ಕ್ರಮಗಳನ್ನು ಕೈಗೊಳ್ಳಲು ಅವಕಾಶ ನೀಡಿದ್ದಾರೆ. ಹೀಗಾಗಿ ಕೆಲಸಗಳ ವೇಗ ಹೆಚ್ಚಾಗಿದೆ. ಹಂತ ಹಂತವಾಗಿ ಪಾಸಿಟಿವ್ ಪ್ರಕರಣಗಳು ಕಡಿಮೆ ಆಗುತ್ತಿವೆ.
ವಿವಿಧ ಬಡಾವಣೆಗಳಿಗೆ ಈಗಾಗಲೇ ಎರಡು, ಮೂರು ಸುತ್ತಿನ ಸ್ಯಾನಿಟೈಸ್ ಸಿಂಪಡಣೆ ಮಾಡಲಾಗಿದೆ, ಜನ ದಟ್ಟಣೆ ನಿಯಂತ್ರಣ ಮಾಡಲು ತರಕಾರಿ ಮಾರುಕಟ್ಟೆಗಳನ್ನು ವಿವಿಧ ಭಾಗಗಳಿಗೆ ಹಂಚಿಕೆ ಮಾಡಿದ್ದಾರೆ. ಕೋವಿಡ್ ಲಸಿಕೆ ಪಡೆಯಲು ಶಾಲೆಯ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ಬಡಾವಣೆಯಲ್ಲಿ ನಾಗರಿಕರ ಗಂಟಲು ದ್ರವ ಪರೀಕ್ಷೆಗೆ ಮುತುವರ್ಜಿ ವಹಿಸಲಾಗಿದೆ.
ಹೊರ ರಾಜ್ಯದಿಂದ ಬಂದವರ ಮೇಲೆ ನಿಗಾ ಇಡಲಾಗಿದೆ. ಒಟ್ಟಿನಲ್ಲಿ ಪಂಚಾಯತಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಸದಸ್ಯರು ಕೂಡ ಪಂಚಾಯತಿ ಕೊರೊನಾ ಮುಕ್ತ ಮಾಡಲು ಸಹಕಾರ ನೀಡುತ್ತಿದ್ದಾರೆ.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಕೆ. ಬೋಪಣ್ಣ ಪೌರಕಾರ್ಮಿಕರಿಗೆ ಹಾಗೂ ಸೋಂಕಿತ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುತ್ತಿದ್ದಾರೆ.
೬ನೇ ವಾರ್ಡ್ ಸದಸ್ಯರಾದ ಹಕೀಂ ಮುಂದಾಳತ್ವದಲ್ಲಿ ತಮ್ಮ ವಾರ್ಡ್ನ ಸೋಂಕಿತ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಸೇರಿದಂತೆ ಮಧ್ಯಾಹ್ನ ಹಾಗೂ ರಾತ್ರಿ ಭೋಜನ ವ್ಯವಸ್ಥೆ ಮಾಡಿದ್ದಾರೆ.
ನಗರದ ನಿರ್ಗತಿಕರಿಗೆ ಪಂಚಾಯಿತಿ ಸದಸ್ಯರಾದ ಮಂಜುರೈ ಹಾಗೂ ರಾಜೇಶ್ ಸಮ್ಮುಖದಲ್ಲಿ ಪ್ರತಿದಿನ ಮಧ್ಯಾಹ್ನ ಭೋಜನ ನೀಡಲಾಗುತ್ತಿದೆ.