ಸಿದ್ದಾಪುರ, ಜೂ. ೧೪: ಐಟಿಡಿಪಿ ಇಲಾಖೆಯ ಮೂಲಕ ಹಾಡಿಗಳ ನಿವಾಸಿಗಳಿಗೆ ನೀಡುವ ಪೌಷ್ಟಿಕ ಆಹಾರದ ಮೊಟ್ಟೆಗಳು ಹಾಳಾಗಿದ್ದು, ಹಾಡಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಹಣ್ಣಿನ ಹಾಡಿಯ ನಿವಾಸಿಗಳಿಗೆ ಅಂಗನವಾಡಿ ಮುಖಾಂತರ ಐಟಿಡಿಪಿ ಇಲಾಖೆಯ ವತಿಯಿಂದ ನೀಡುತ್ತಿರುವ ಪೌಷ್ಟಿಕ ಆಹಾರದೊಂದಿಗೆ ನೀಡುವ ಮೊಟ್ಟೆಗಳ ಪೈಕಿ ಹಳೆಯ ಹಾಳಾಗಿರುವ ಮೊಟ್ಟೆಗಳನ್ನು ವಿತರಣೆ ಮಾಡಲಾಗಿದೆ ಎಂದು ಹಾಡಿಯ ನಿವಾಸಿಗಳು ಮಾಲ್ದಾರೆ ಗ್ರಾ.ಪಂ.ಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪಂಚಾಯಿತಿ ಅಧ್ಯಕ್ಷ ಸಮೀರ್ ಹಾಗೂ ಸದಸ್ಯರುಗಳು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಹಾಡಿಯ ನಿವಾಸಿಗಳಿಗೆ ನೀಡಲಾಗಿದ್ದ ಒಡೆದು ಹೋಗಿರುವ ಮೊಟ್ಟೆಗಳು ದುರ್ನಾತ ಬೀರುತ್ತಿತ್ತು ಎಂದು ಹಾಡಿಯ ನಿವಾಸಿಗಳು ಆರೋಪಿಸಿದರು. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಅಧ್ಯಕ್ಷರ ಬಳಿ ಹಾಡಿ ನಿವಾಸಿಗಳು ಒತ್ತಾಯಿಸಿದರು.

ಇತ್ತೀಚೆಗೆ ದಿಡ್ಡಳ್ಳಿ ಭಾಗದಲ್ಲೂ ಕೂಡ ಪೌಷ್ಟಿಕ ಆಹಾರಗಳು ಗುಣಮಟ್ಟದಿಂದ ಕೂಡಿಲ್ಲವೆಂದು ಹಾಡಿಯ ನಿವಾಸಿಗಳು ದೂರಿದರು. ಆಹಾರಗಳು ಕಳಪೆ ಗುಣಮಟ್ಟದಿಂದ ಕೂಡಿರುತ್ತವೆ ಎಂದು ಹಾಡಿಯ ನಿವಾಸಿಗಳು ಐಟಿಡಿಪಿ ಇಲಾಖಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

-ವಾಸು