(ಹೆಚ್.ಜೆ. ರಾಕೇಶ್)

ಮಡಿಕೇರಿ, ಜೂ. ೧೩: ಕೊರೊನಾ ಹೊಡೆತದಿಂದ ಸೃಷ್ಟಿಯಾಗಿರುವ ವ್ಯತಿರಿಕ್ತ ಪರಿಸ್ಥಿತಿಯ ನಡುವೆ ಅಕ್ಷರ ದಾಸೋಹದ ಸೌಲಭ್ಯ ವಿದ್ಯಾರ್ಥಿಗಳಿಗೆ ತಲುಪುತ್ತಿದೆ. ಕೊಡಗು ಜಿಲ್ಲೆಯ ೩೨,೨೩೨ ವಿದ್ಯಾರ್ಥಿಗಳಿಗೆ ಯೋಜನೆ ಮೂಲಕ ಅಕ್ಕಿ, ಬೇಳೆ, ಎಣ್ಣೆ, ಉಪ್ಪು ದೊರಕುತ್ತಿದ್ದು, ಜೂನ್ ಅಂತ್ಯದಲ್ಲಿ ಮತ್ತೊಂದು ಸುತ್ತಿನ ಆಹಾರ ಉತ್ಪನ್ನಗಳು ವಿದ್ಯಾರ್ಥಿಗಳ ಕೈ ಸೇರಲಿವೆೆ.

ಅನುದಾನಿತ ಹಾಗೂ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೊರೊನಾ ಪರಿಸ್ಥಿತಿಯ ಮುನ್ನ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿತ್ತು. ಆದರೆ, ಕೊರೊನಾ ಕರಿನೆರಳು ಶಾಲೆ ಬಾಗಿಲುಗಳನ್ನು ಮುಚ್ಚಿಸಿದೆ. ಈ ಹಿನ್ನೆಲೆ ಸರಕಾರ ೨೦೨೦ರ ಏಪ್ರಿಲ್‌ನಿಂದ ಅಕ್ಷರ ದಾಸೋಹ ಯೋಜನೆ ಮೂಲಕ ಓರ್ವ ವಿದ್ಯಾರ್ಥಿಗೆ ಒಂದು ಹೊತ್ತಿಗೆ ನಿಗದಿಯಾದ ಆಹಾರ ಉತ್ಪನ್ನಗಳನ್ನು ತಲುಪಿಸುತ್ತಿದೆ.

೩೨,೨೩೨ ವಿದ್ಯಾರ್ಥಿಗಳು

ಕೊಡಗು ಜಿಲ್ಲೆಯಲ್ಲಿ ಅಕ್ಷರ ದಾಸೋಹಕ್ಕೆ ೩೨,೨೩೨ ವಿದ್ಯಾರ್ಥಿಗಳು ಒಳಪಟ್ಟಿದ್ದಾರೆ. ಈ ಪೈಕಿ ಮಡಿಕೇರಿ ತಾಲೂಕಿನಲ್ಲಿ ೮,೬೬೭, ವೀರಾಜಪೇಟೆ ತಾಲೂಕಿನಲ್ಲಿ ೧೧,೯೯೩, ಸೋಮವಾರಪೇಟೆ ತಾಲೂಕಿನಲ್ಲಿ ೧೧,೫೭೨ ವಿದ್ಯಾರ್ಥಿಗಳಿದ್ದಾರೆ.

ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಆಹಾರ ಉತ್ಪನ್ನಗಳನ್ನು ಜಿಲ್ಲಾ ಅಕ್ಷರ ದಾಸೋಹ ಇಲಾಖೆ ಮೂಲಕ ತಲುಪಿಸಲಾಗುತ್ತದೆ. ಟೆಂಡರ್ ಪಡೆದವರು ರಾಜ್ಯದ ವಿವಿಧೆಡೆಗಳಿಂದ ಸಾಮಗ್ರಿಗಳನ್ನು ಕಳುಹಿಸುತ್ತಾರೆ.

(ಮೊದಲ ಪುಟದಿಂದ) ಬಳಿಕ ಅದನ್ನು ಟೆಂಡರ್ ಪಡೆದ ವಾಹನಗಳ ಮೂಲಕ ಜಿಲ್ಲೆಯ ಎಲ್ಲಾ ಶಾಲೆಗೆ ರವಾನಿಸಲಾಗುತ್ತದೆ. ಈಗಾಗಲೇ ೨೦೨೦ರ ಏಪ್ರಿಲ್‌ನಿಂದ ೨೦೨೧ರ ಏಪ್ರಿಲ್‌ವರೆಗಿನ ೨೭೪ ದಿನದ ಆಹಾರ ಉತ್ಪನ್ನಗಳನ್ನು ತಲುಪಿಸುವ ಕೆಲಸವಾಗಿದೆ.

ಅಕ್ಕಿ, ಬೇಳೆ, ಎಣ್ಣೆ..

ಅಕ್ಷರ ದಾಸೋಹದ ಮೂಲಕ ಜಿಲ್ಲೆಯ ಶಾಲೆಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಉಪ್ಪು ಪೂರೈಸಲಾಗುತ್ತದೆ. ತಲಾ ಓರ್ವ ವಿದ್ಯಾರ್ಥಿಗೆ ಇಂತಿಷ್ಟು ಎಂದು ಉತ್ಪನ್ನಗಳನ್ನು ನಿಗದಿಪಡಿಸಲಾಗಿದೆ. ಅದರಂತೆ ಹಂಚಿಕೆ ಮಾಡಲಾಗುತ್ತದೆ.

ಮಡಿಕೇರಿ ತಾಲೂಕಿನ ೧ ರಿಂದ ೫ನೇ ತರಗತಿಯ ತಲಾ ವಿದ್ಯಾರ್ಥಿಗೆ ೧೦ ಕೆಜಿ ೪೦೦ ಗ್ರಾಂ ಅಕ್ಕಿ, ೩ ಕೆಜಿ ೧೨೯ ಗ್ರಾಂ ಬೇಳೆ, ೩ ಲೀಟರ್ ಎಣ್ಣೆ, ೧ ಕೆಜಿ ಉಪ್ಪು, ೬ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ೧೫ ಕೆಜಿ ೬೦೦ ಗ್ರಾಂ ಅಕ್ಕಿ, ೬ ಕೆಜಿ ೯೮೦ ಗ್ರಾಂ ಬೇಳೆ, ೩ ಲೀಟರ್ ಎಣ್ಣೆ, ೧ ಕೆಜಿ ಉಪ್ಪು ವಿತರಿಸಲಾಗುತ್ತದೆ. ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ೧ ರಿಂದ ೫ನೇ ತರಗತಿ ತಲಾ ಓರ್ವ ವಿದ್ಯಾರ್ಥಿಗಳಿಗೆ ೯ ಕೆಜಿ ೫೦೦ ಗ್ರಾಂ ಅಕ್ಕಿ, ೪ ಕೆಜಿ ೧೨೯ ಗ್ರಾಂ ಬೇಳೆ, ೬ ರಿಂದ ೮ನೇ ತರಗತಿ ವಿದ್ಯಾರ್ಥಿಗೆ ೧೩ ಕೆಜಿ ೫೦೦ ಗ್ರಾಂ ಅಕ್ಕಿ, ೬ ಕೆಜಿ ೯೮೦ ಗ್ರಾಂ ಬೇಳೆ, ೯ ರಿಂದ ೧೦ನೇ ತರಗತಿ ವಿದ್ಯಾರ್ಥಿಗೆ ೧೯ ಕೆಜಿ ೮೦೦ ಗ್ರಾಂ ಅಕ್ಕಿ, ೬ ಕೆಜಿ ೯೮೦ ಗ್ರಾಂ ಬೇಳೆ ವಿತರಣೆಯಾಗುತ್ತಿವೆÉ. ಇದರೊಂದಿಗೆ ೩ ಲೀಟರ್ ಎಣ್ಣೆ, ೧ ಕೆಜಿ ಉಪ್ಪು ನೀಡಲಾಗುತ್ತದೆ.

೨೭೪ ದಿನದ ಉತ್ಪನ್ನ ವಿತರಣೆ

ಜಿಲ್ಲೆಯಲ್ಲಿ ೨೦೨೦ರ ಏಪ್ರಿಲ್‌ನಿಂದ ೨೦೨೧ ಏಪ್ರಿಲ್‌ವರೆಗೆ ಒಟ್ಟು ೨೭೪ ದಿನದ ಆಹಾರ ಉತ್ಪನ್ನಗಳನ್ನು ವಿತರಿಸಲಾಗಿದೆ. ಮೊದಲು ಎರಡು, ಮೂರು ತಿಂಗಳಿಗೊಮ್ಮೆ ಉತ್ಪನ್ನ ವಿತರಿಸಲಾಗುತ್ತಿತ್ತು. ಇನ್ನು ಮುಂದೆ ಮೂರು ತಿಂಗಳಿಗೊಮ್ಮೆ ವಿತರಿಸಲು ಕ್ರಮವಹಿಸಲಾಗುತ್ತದೆ ಎಂದು ಅಕ್ಷರ ದಾಸೋಹ ಯೋಜನೆಯ ಜಿಲ್ಲಾ ಶಿಕ್ಷಣಾಧಿಕಾರಿ ಹಸೀನ ಬಾನು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

೨೦೨೦ರ ಏಪ್ರಿಲ್, ಮೇ ತಿಂಗಳ ೩೪ ದಿನ, ಜೂನ್ ಮತ್ತು ಜುಲೈ ತಿಂಗಳ ೫೩ ದಿನ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್‌ನ ೫೫ ದಿನ, ನವೆಂಬರ್, ಡಿಸೆಂಬರ್‌ನ ೪೯ ದಿನದ ಆಹಾರ ಉತ್ಪನ್ನ ವಿತರಿಸಲಾಗಿದೆ. ೨೦೨೧ರ ಜನವರಿ, ಫೆಬ್ರವರಿಯಲ್ಲಿ ೪೯ ದಿನ ಹಾಗೂ ಮಾರ್ಚ್, ಏಪ್ರಿಲ್‌ನ ೩೪ ದಿನದ ಆಹಾರ ಉತ್ಪನ್ನ ವಿತರಿಸಲಾಗಿದೆ. ಅದಲ್ಲದೆ ಮೇ, ಜೂನ್ ತಿಂಗಳ ಸರಕು ಇನ್ನೂ ೨ ವಾರದಲ್ಲಿ ಬರಲಿದೆ. ನಂತರ ಅದನ್ನು ವಿತರಿಸಲಾಗುತ್ತದೆ.

ದಸರ ರಜೆ, ಬೇಸಿಗೆ ರಜೆ ಸೇರಿದಂತೆ ಇನ್ನಿತರ ರಜೆಗಳಿದ್ದ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಿಗೆ ಮಾತ್ರ ಉತ್ಪನ್ನ ನೀಡಲಾಗುತ್ತದೆ.

ತಲುಪಿಸಲು ಕ್ರಮ

ಸರಬರಾಜು ಆಗುವ ಉತ್ಪನ್ನಗಳನ್ನು ಟೆಂಡರ್ ಪಡೆದ ವಾಹನಗಳ ಮೂಲಕ ತಲುಪಿಸಲಾಗುತ್ತದೆ. ಶಾಲೆಯ ಮುಖ್ಯ ಶಿಕ್ಷಕರು ಇದರ ಮೇಲುಸ್ತುವಾರಿ ವಹಿಸಬೇಕು. ಶಾಲೆಗೆ ಬಂದು ಪೋಷಕರು ಪಡೆದುಕೊಳ್ಳಬೇಕು.

ದೂರದಲ್ಲಿರುವವರಿಗೆ ಗ್ರಾಮ ಪಂಚಾಯಿತಿ ಮತ್ತು ಶಿಕ್ಷಕರ ಮೂಲಕ ತಲುಪಿಸಲಾಗುತ್ತದೆ. ಗ್ರಾ.ಪಂ ತಲುಪಿಸಲು ಪೂರಕ ಬೆಂಬಲ ನೀಡುತ್ತಿದ್ದಾರೆ. ಜೊತೆಗೆ ಜಿಲ್ಲಾ ಶಿಕ್ಷಣಾಧಿಕಾರಿ, ತಾಲೂಕು ಶಿಕ್ಷಣಾಧಿಕಾರಿಗಳು, ಸಿಆರ್‌ಪಿಗಳು ಸೇರಿದಂತೆ ಶಿಕ್ಷಕರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಅಧಿಕಾರಿ ಹಸೀನ ಬಾನು ತಿಳಿಸಿದ್ದಾರೆ.