ಕೂಡಿಗೆ, ಜೂ. ೧೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ವಸತಿ ರಹಿತರು ಇದ್ದು ಅವರುಗಳಿಗೆ ನಿವೇಶನಗಳನ್ನು ಒದಗಿಸುವಂತೆ ಗ್ರಾಮ ವ್ಯಾಪ್ತಿಯ ವಸತಿ ರಹಿತರು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಶಾಸಕರು ಕೂಡಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿವೇಶನ ರಹಿತರು, ಬ್ಯಾಡಗೊಟ್ಟ ಮತ್ತು ಹುದುಗೂರು ಗ್ರಾಮದಲ್ಲಿ ನಾಲ್ಕು ಎಕರೆಗಳಷ್ಟು ವಿಸ್ತೀರ್ಣದ ಜಾಗವಿದ್ದು ಆ ಜಾಗವನ್ನು ನಿವೇಶನ ರಹಿತರಿಗೆ ಮನೆ ನಿರ್ಮಿಸಲು ಯೋಜನೆ ತಯಾರಿಸಲಾಗಿದೆ. ಅದರಂತೆ ಗ್ರಾಮ ಸಭೆಯಲ್ಲಿ ನಿವೇಶನ ರಹಿತರ ಪಟ್ಟಿಯನ್ನು ಮಾಡಿ ನಾಲ್ಕು ವರ್ಷಗಳು ಕಳೆದರೂ ಇದುವರೆಗೂ ನಿವೇಶನ ದೊರೆತ್ತಿಲ್ಲ ಎಂದು ನಿವೇಶನ ರಹಿತರಾದ ದೇವಕಿ, ಪದ್ಮ, ಮಹೇಶ್, ಚಂದ್ರ ಸೇರಿದಂತೆ ಹಲವಾರು ಮಂದಿ ಶಾಸಕರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಕೊರೊನಾ ರೋಗದ ಲಕ್ಷಣಗಳು ಕಡಿಮೆಯಾದ ನಂತರ ದಿನಗಳಲ್ಲಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಯ್ದಿರಿಸಿದ ಜಾಗದಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ಸದ್ಯದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು. ಜೊತೆಗೆ ಈಗಾಗಲೇ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಎಲ್ಲರಿಗೂ ಹಕ್ಕು ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.