ಗೋಣಿಕೊಪ್ಪ ವರದಿ, ಜೂ. ೧೨: ಐದು ದಿನಗಳಿಂದ ಗ್ರಾಮ ಸಂಚಾರಿಯಾಗಿದ್ದ ೨೦ ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಸೇರಿಸುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.

ತಿತಿಮತಿ ಆರ್‌ಆರ್‌ಟಿ ತಂಡ ಮತ್ತು ಅನೆಚೌಕೂರು ವನ್ಯಜೀವಿ ವಲಯ ಜಂಟಿ ಕಾರ್ಯಾಚರಣೆ ನಡೆಸಿ ನೊಕ್ಯ ಗ್ರಾಮಕ್ಕೆ ಸೇರಿದ ಕುಂಞÂರಾಮನಕಟ್ಟೆಯಲ್ಲಿನ ರೈಲ್ವೇ ಬ್ಯಾರಿಕೇಡ್ ಗೇಟ್ ಮೂಲಕ ಶನಿವಾರ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ನಾಗರಹೊಳೆ ಉದ್ಯಾನವನದ ಆನೆಚೌಕೂರು ವಲಯ ವ್ಯಾಪ್ತಿಯ ಮೂಲಕ ಅರಣ್ಯಕ್ಕೆ ಸೇರಿಸಲಾಯಿತು.

ಶುಕ್ರವಾರ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬುಕೋಟೆ ಎಂಬಲ್ಲಿ ಸೇರಿಕೊಂಡಿದ್ದವು. ಸಂಜೆವರೆಗೂ ನಡೆದ ಕಾರ್ಯಾಚರಣೆಯಲ್ಲಿ ನೊಕ್ಯ ಗ್ರಾಮದ ಚೆಪ್ಪುಡೀರ ಕುಟುಂಬದ ಗದ್ದೆವರೆಗೆ ಅಟ್ಟಲಾಗಿತ್ತು. ಶನಿವಾರ ಮುಂಜಾನೆಯಿAದ ನಡೆಸಿದ ಕಾರ್ಯಾಚರಣೆಯಲ್ಲಿ ಕಾಡಿಗೆ ಸೇರಿಸಲಾಯಿತು.

ಜೂನ್ ೭ ರಂದು ತಿತಿಮತಿ ವ್ಯಾಪ್ತಿಯ ಮೂಲಕ ಮಾಯಮುಡಿ, ಬಾಳಾಜಿ ಗ್ರಾಮಗಳಲ್ಲಿ ಸೇರಿಕೊಂಡಿದ್ದ ಆನೆಗಳ ಹಿಂಡು ರಾತ್ರಿ ರ‍್ವತೊಕ್ಲು ಗ್ರಾಮದಲ್ಲಿ ಬೆಳೆನಾಶ ಮಾಡಿದ್ದವು. ಅಂದು ಬೆಳಿಗ್ಗೆ ವಾಕಿಂಗ್ ತೆರಳುತ್ತಿದ್ದ ವಿದ್ಯುತ್ ಗುತ್ತಿಗೆದಾರ ರಂಗಸ್ವಾಮಿ ಅವರು ಕೂಡ ಆನೆಗಳ ದಾಳಿಗೆ ಬಲಿಯಾಗಿದ್ದರು. ನಂತರ ರ‍್ವತೊಕ್ಲು ಗ್ರಾಮದಿಂದ ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿದ ಸಂದರ್ಭ ಹೆದ್ದಾರಿ ಮೂಲಕ ೧೩ ಆನೆಗಳು ಪ್ರತ್ಯಕ್ಷಗೊಂಡು ಭಯಮೂಡಿಸಿದ್ದವು. ಶುಕ್ರವಾರ ಮಾಯಮುಡಿ, ಮತ್ತೂರು ಗ್ರಾಮಗಳಲ್ಲಿ ಬೆಳೆನಾಶ ಮಾಡಿದ್ದವು. ಇದೀಗ ಆನೆಗಳು ಕಾಡು ಸೇರಿರುವುದು ಜನರು ನಿಟ್ಟುಸಿರು ಬಿಡುವಂತಾಗಿದೆ. ಸುಮಾರು ೧೫ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.