ಕೋವಿಡ್ ಆಸ್ಪತ್ರೆಯಲ್ಲಿ ಮರಣ ಪ್ರಮಾಣ ಅಧಿಕವಿದ್ದ ಸಂದರ್ಭದಲ್ಲೇ ಪಿಪಿಇ ಕಿಟ್ ಧರಿಸಿ ಸೋಂಕಿತರ ಭೇಟಿ ಮಾಡಿದ್ದೆ. ಕೋವಿಡ್ ಕೇರ್ ಸೆಂಟರ್‌ನ ಅವ್ಯವಸ್ಥೆಗಳನ್ನು ಪರಿಶೀಲಿಸಿ, ವೈದ್ಯರ ಸಭೆ ನಡೆಸಿ ಸುಧಾರಣಾ ಕ್ರಮಗಳನ್ನು ಕೈಗೊಂಡ ನಂತರ ಉತ್ತಮ ಚಿಕಿತ್ಸೆ ದೊರೆಯುವಂತಾಯಿತು. ಮರಣದ ಪ್ರಮಾಣವೂ ಕಡಿಮೆಯಾಯಿತು. ಇದೀಗ ಪಾಸಿಟಿವಿಟಿ ದರ ಇಳಿಕೆಯಾಗುತ್ತಿದ್ದು, ಹಂತಹAತವಾಗಿ ಅನ್‌ಲಾಕ್ ಮಾಡುವ ಬಗ್ಗೆ ಚರ್ಚಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯಿಸಿದ್ದಾರೆ.

‘ಕೋವಿಡ್ ಆಸ್ಪತ್ರೆಯ ಒಳಗೆ ಎರಡೂ ಮುಕ್ಕಾಲು ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಿ, ಪ್ರತಿಯೊಬ್ಬ ಸೋಂಕಿತರನ್ನು ಮುಖತಃ ಮಾತುಕತೆ ನಡೆಸಿದ್ದೇನೆ. ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿದ್ದು, ವೈದ್ಯರ ಸಭೆ ನಡೆಸಿ ನ್ಯೂನತೆಗಳನ್ನು ಸರಿಪಡಿಸಲಾಗಿದೆ. ವೈದ್ಯರ ಕೊರತೆ ನೀಗಿಸಲು ಕ್ರಮ ಕೈಗೊಂಡ ಪರಿಣಾಮ ವೈದ್ಯರ ಕೊರತೆಯೂ ನೀಗಿದೆ. ಪ್ರತಿ ದಿನ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ. ನನ್ನ ಭೇಟಿಯ ನಂತರ ಮರಣದ ಪ್ರಮಾಣವೂ ಇಳಿಕೆಯಾಗಿದೆ. ರೋಗಿಗಳ ಆರೈಕೆಯಲ್ಲೂ ಸುಧಾರಣೆಯಾಗಿದೆ’

‘ಮುಂದಿನ ತಾ. ೧೪ರ ಒಳಗೆ ಪಾಸಿಟಿವಿಟಿ ದರ ಶೇ.೫ಕ್ಕೂ ಕಡಿಮೆ ಬರುವ ವಿಶ್ವಾಸವಿದೆ. ಕೂಲಿ ಕೆಲಸಕ್ಕೆ ತೆರಳುವವರೂ ಸಹ ಲಸಿಕೆ ಪಡೆಯಬೇಕು. ವಾಹನ ಚಾಲಕರೊಂದಿಗೆ ಇವರುಗಳೂ ಸಹ ನೆಗೆಟಿವ್ ಪ್ರಮಾಣ ಪತ್ರ ಹೊಂದಿರಬೇಕು. ಇಂತಹ ನಿಯಮಗಳನ್ನು ಜಾರಿಗೆ ತರುತ್ತೇವೆ’

‘ಮಳೆಗಾಲಕ್ಕೂ ಮುನ್ನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ಅತಿವೃಷ್ಟಿ ತಡೆಯಲು ಎಲ್ಲಾ ಪಂಚಾಯಿತಿಗಳಿಗೆ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಎಲ್ಲಾ ಇಲಾಖೆಗಳನ್ನು ಒಳಗೊಂಡ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಪ್ರತಿ ಗ್ರಾ.ಪಂ.ಗಳಲ್ಲಿ ಒಂದು ಜೆಸಿಬಿ, ಮರ ಕತ್ತರಿಸುವ ಯಂತ್ರ, ಹಗ್ಗಗಳನ್ನು ಇಟ್ಟುಕೊಳ್ಳುವ ಬಗ್ಗೆ ಸೂಚನೆ ನೀಡಿದ್ದೇವೆ. ಸಣ್ಣಪುಟ್ಟ ಸಮಸ್ಯೆಗಳಾದರೂ ಗ್ರಾ.ಪಂ. ಮಟ್ಟದಲ್ಲೇ ಪರಿಹರಿಸಿಕೊಳ್ಳುವ ಸಂಬAಧ ಅಗತ್ಯ ಕ್ರಮವಹಿಸಲಾಗಿದೆ’

‘ಆರೋಗ್ಯದ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುವಂತೆ ಪತ್ನಿ ಹೇಳುತ್ತಿರುತ್ತಾರೆ. ಮನೆಗೆ ಬಂದ ತಕ್ಷಣ ಮನೆಯೊಳಗೆ ಸೇರಿಸುವುದಿಲ್ಲ! ಮೊದಲು ಬಚ್ಚಲುಮನೆಗೆ ಕಳುಹಿಸುತ್ತಾರೆ. ಸ್ನಾನದ ನಂತರ ಉಪ್ಪುನೀರು ಸಿದ್ಧ ಮಾಡಿರುತ್ತಾರೆ. ಪ್ರತಿದಿನ ೨ ಮಾಸ್ಕ್ಗಳನ್ನು ಹಾಕಿ ಕಳುಹಿಸುತ್ತಾರೆ. ಅವರ ಸಹಕಾರ ಇರುವುದರಿಂದ ಹೆಚ್ಚಿನ ಕೆಲಸ ಮಾಡಲು ಸಹಕಾರಿಯಾಗಿದೆ. ನನ್ನ ಈರ್ವರು ಮಕ್ಕಳು ವೈದ್ಯರಾಗಿದ್ದು, ಪಿಪಿಇ ಕಿಟ್ ಧರಿಸಿ ಕೇರ್‌ಸೆಂಟರ್ ಒಳಗೆ ಹೋಗಲು ಅವರೇ ಪ್ರೇರಣೆ. ಮೊದಲು ನನ್ನಲ್ಲೂ ಭಯ ಇತ್ತು. ಮಕ್ಕಳ ಸೂಚನೆಯಂತೆ ಕಿಟ್ ಧರಿಸಿ ಭೇಟಿ ನೀಡಿದ್ದೇನೆ. ವ್ಯವಸ್ಥೆ ಸುಧಾರಣೆಯಾಗಿದೆ’ ಎಂದು ರಂಜನ್ ಪ್ರತಿಕ್ರಿಯೆ ನೀಡಿದ್ದಾರೆ.