ಮಡಿಕೇರಿ, ಜೂ. ೧೧: ಶ್ರೀಮಂಗಲ ಹೋಬಳಿ ಕಂದಾಯ ಇಲಾಖೆಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ರೂ. ೧೮.೫೦ ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಆಕ್ಷೇಪ ಕೇಳಿಬಂದಿದ್ದು, ಸಮರ್ಪಕ ರೀತಿಯಲ್ಲಿ ಕೆಲಸ ನಿರ್ವಹಿಸಲು ಆಗ್ರಹಿಸಲಾಗಿದೆ.

ಹಳೆಯ ಕಟ್ಟಡ ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ನಿರ್ಮಿತಿ ಕೇಂದ್ರದ ಮೂಲಕ ನಿರ್ವಹಿಸಲಾಗುತ್ತಿದೆ. ರೂ. ೧೮.೫೦ ಲಕ್ಷದ ಕಾಮಗಾರಿ ಇದಾಗಿದ್ದು, ಇದೀಗ ಕಾಮಗಾರಿ ನಡೆಯುತ್ತಿದೆ. ಆದರೆ ಸಂಬAಧಿಸಿದ ಗುತ್ತಿಗೆದಾರರು ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಲು ತೆಗೆದಿರುವ ಗುಂಡಿಯನ್ನು ಗಮನಿಸಿದರೆ ಈ ಬಗ್ಗೆ ಸಂಶಯ ವ್ಯಕ್ತವಾಗುತ್ತಿರುವುದಾಗಿ ಸಾರ್ವಜನಿಕರ ಪರವಾಗಿ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗೂ ಸ್ಥಳೀಯ ವಿಎಸ್‌ಎಸ್‌ಎನ್ ಅಧ್ಯಕ್ಷರಾಗಿರುವ ಅಜ್ಜಮಾಡ ಟಿ. ಚಂಗಪ್ಪ ಆಕ್ಷೇಪಿಸಿದ್ದಾರೆ.

ಸಂಬAಧಿಸಿದ ಇಲಾಖೆ ಹಾಗೂ ಅಧಿಕಾರಿಗಳು ಕಾಮಗಾರಿಯ ಪೂರ್ಣ ವಿವರ, ನೀಲಿ ನಕ್ಷೆ ಹಾಗೂ ರೂಪು-ರೇಷೆಯ ಬಗ್ಗೆ ಸಾರ್ವಜನಿಕವಾಗಿ ಸ್ಥಳದಲ್ಲಿ ಪ್ರಕಟಿಸಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕು. ಇದೀಗ ಇದರಲ್ಲಿ ಭ್ರಷ್ಟಾಚಾರದ ಶಂಕೆಯಿದ್ದು, ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ಸಾರ್ವಜನಿಕರು, ಸಂಘ-ಸAಸ್ಥೆಗಳ ನೆರವಿನೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ತಹಶೀಲ್ದಾರ್ ಭೇಟಿ

ಈ ಬಗ್ಗೆ ಸಾರ್ವಜನಿಕರಿಂದ ದೊರೆತ ಮಾಹಿತಿಯಂತೆ ಪೊನ್ನಂಪೇಟೆ ತಹಶೀಲ್ದಾರ್ ಕಾವ್ಯರಾಣಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯಕ್ಕೆ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.