ಪೊನ್ನಂಪೇಟೆ, ಜೂ. ೧೧: ಪೊನ್ನಂಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ನಡೆದಿದೆ. ಮಲ್ಲಮಾಡ ಉಷಾ ಎಂಬವರ ಗಬ್ಬದ ಹಸುವಿನ ಮೇಲೆ ಇಂದು ಬೆಳಿಗ್ಗೆ ಹುಲಿ ದಾಳಿ ನಡೆಸಿ ಕೊಂದು ಹಾಕಿ ಸ್ವಲ್ಪ ಭಾಗವನ್ನು ತಿಂದು ಹಾಕಿದೆ.

ಸ್ಥಳಕ್ಕೆ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಆಗಮಿಸಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಡು ಬಿಟ್ಟು ನಾಡಿಗೆ ಬಂದಿರುವ ಹುಲಿಗಳನ್ನು ಸೆರೆಹಿಡಿಯುವಂತೆ ಆಗ್ರಹಿಸಿದರು. ಹಸು ಕಳೆದುಕೊಂಡವರಿಗೆ ಇಲಾಖೆ ನೀಡುತ್ತಿರುವ ಪರಿಹಾರ ಸಾಲುತ್ತಿಲ್ಲ. ಆದ್ದರಿಂದ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು. ಪೊನ್ನಂಪೇಟೆ ವಲಯ ಡಿವೈಆರ್‌ಎಫ್‌ಓ ಬೋಪಣ್ಣ ಹಾಗೂ ದಿವಾಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಪೊನ್ನಂಪೇಟೆ ಪಶು ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭ ಕಾನೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಮಾಡ ರಶ್ಮಿ, ಉಪಾಧ್ಯಕ್ಷ ಸಚಿನ್ ಸೋಮಣ್ಣ, ಸದಸ್ಯರಾದ ಪಿ.ಸಿ. ಮಂಜು, ರೈತ ಸಂಘದ ಮುಖಂಡರಾದ ಪುಚ್ಚಿಮಾಡ ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು, ಮಲ್ಲೇಂಗಡ ಸುಬ್ರಮಣಿ, ಮಚ್ಚಮಾಡ ಕಿರಣ್ ಗಣಪತಿ, ಗ್ರಾಮಸ್ಥರಾದ ಮಲ್ಲಮಾಡ ಪೂಣಚ್ಚ, ಮಲ್ಲಮಾಡ ಈಶ್ವರ, ಅರಣ್ಯ ರಕ್ಷಕ ಅಂಥೋಣಿ ಪ್ರಕಾಶ್, ಆರ್‌ಆರ್‌ಟಿ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.