
(ವಿಶೇಷ ವರದಿ: ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಜೂ. ೧೧: ವಾಣಿಜ್ಯ ಕೇಂದ್ರ ಗೋಣಿಕೊಪ್ಪಲುವಿ ನಲ್ಲಿರುವ ಕೀರೆಹೊಳೆ, ಬೈಪಾಸ್ನ ಕೀರೆ ಹೊಳೆ, ಹಾಗೂ ವೆಂಕಟಪ್ಪ ಲೇಔಟ್ನ ಸಮೀಪ ಹರಿಯುತ್ತಿರುವ ಸಣ್ಣ ತೋಡುವಿನ ಎರಡು ಬದಿಯ ಜಾಗದ ಬಹುಪಾಲನ್ನು ಬಲಾಢ್ಯ ವ್ಯಕ್ತಿಗಳು ತಮ್ಮ ಶಕ್ತಿ, ರಾಜಕೀಯ ಪ್ರಭಾವ ಬೀರಿ ಒತ್ತುವರಿ ಮಾಡಿಕೊಂಡಿದ್ದರು.
ಈ ಬಗ್ಗೆ ಹಲವು ಬಾರಿ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಆಗಮಿಸಿ ಒತ್ತುವರಿ ಪ್ರದೇಶವನ್ನು ವೀಕ್ಷಣೆ ಮಾಡಿದ್ದರು, ನಂತರ ದಿನಗಳಲ್ಲಿ ಈ ಬಗ್ಗೆ ಯಾವುದೇ ಕ್ರಮ ಜರುಗಲಿಲ್ಲ. ಇದರಿಂದಾಗಿ ಅಕ್ರಮ ಒತ್ತುವರಿದಾರರು ಮತ್ತಷ್ಟು ಹೊಳೆಯನ್ನು ಒತ್ತುವರಿ ಮುಂದುವರಿಸಿದ್ದರು. ಹೊಳೆಯ ದಿಕ್ಕನ್ನೆ ಬದಲಾಯಿಸಿ ತಮಗೆ ಬೇಕಾದ ರೀತಿಯಲ್ಲಿ ಒತ್ತುವರಿ ನಡೆದಿತ್ತು.
ಈ ಬಾರಿ ಮಳೆಯ ಮುನ್ಸೂಚನೆ ಸಂದರ್ಭ ಪಂಚಾಯಿತಿ ವತಿಯಿಂದ ಹೊಳೆಯಲ್ಲಿ ತುಂಬಿದ್ದ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಹೂಳೆತ್ತುವ ಸಂದರ್ಭ ಕೀರೆಹೊಳೆ, ಕೈತೋಡು ಇನ್ನಷ್ಟು ಒತ್ತುವರಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ‘ಶಕ್ತಿ' ಸಮಗ್ರ ವರದಿ ಪ್ರಕಟಿಸಿ ಜಿಲ್ಲಾಡಳಿತ, ತಾಲೂಕು ಆಡಳಿತದ ಗಮನ ಸೆಳೆಯಲಾಗಿತ್ತು.
ಸಮಗ್ರ ವರದಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದ ನಿರ್ದೇಶನದ ಮೇರೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ಸ್ಥಳಕ್ಕೆ ಆಗಮಿಸಿ ವಸ್ತು ಸ್ಥಿತಿಯನ್ನು ಅವಲೋಕನ ಮಾಡಿದ್ದರು. ತಕ್ಷಣವೇ ಈ ಬಗ್ಗೆ ಸರ್ವೆ ಇಲಾಖೆಯ ವತಿಯಿಂದ ಸರ್ವೆ ಕಾರ್ಯಕ್ಕೆ ಸೂಚನೆ ನೀಡಿದ್ದರು.
(ಮೊದಲ ಪುಟದಿಂದ) ಈಗಾಗಲೇ ಬೈಪಾಸ್ ರಸ್ತೆಯ ಕೈತೋಡು ಅಕ್ರಮ ಒತ್ತುವರಿ ಬಗ್ಗೆ ಸಂಪೂರ್ಣ ಸರ್ವೆ ಕಾರ್ಯವನ್ನು ಸರ್ವೇಯರ್ ಅಶೋಕ್ ರೆಡ್ಡಿ ಹಾಗೂ ಹಿರಿಯ ಅಧಿಕಾರಿ ಬಾನಂಗಡ ಅರುಣ್ ಸಮ್ಮುಖದಲ್ಲಿ ನಡೆಸಲಾಗಿದೆ.
ಕೈ ತೋಡಿನ ಸಂಪೂರ್ಣ ಒತ್ತುವರಿ ಬಗ್ಗೆ ತಹಶೀಲ್ದಾರ್ ಯೋಗಾನಂದ ಅವರಿಗೆ ವರದಿ ನೀಡಿದ್ದಾರೆ. ತಹಶೀಲ್ದಾರ್ ಯೋಗಾನಂದ ಅವರ ಕ್ರಮಕ್ಕೆ ನಾಗರಿಕರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದೀಗ ಕೀರೆಹೊಳೆಗೆ ಸೇರುವ ಕೈತೋಡನ್ನು ಯಾರೆಲ್ಲಾ ಎಷ್ಟೆಷ್ಟು ಒತ್ತುವರಿ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯಲು ಹೊಳೆಯ ಎರಡು ಬದಿಯ ಗಡಿ ಗುರುತು ಕಾರ್ಯ ಕೂಡ ನಡೆದಿದ್ದು ಒಂದು ವಾರದೊಳಗೆ ವರದಿಯೂ ತಹಶೀಲ್ದಾರ್ ಯೋಗಾನಂದ ಅವರ ಕೈ ಸೇರಲಿದೆ. ತದನಂತರ ಜಿಲ್ಲಾಧಿಕಾರಿಗಳ ಬಳಿ ಈ ವಿಷಯವನ್ನು ಪ್ರಸ್ತಾಪಿಸಿ ಅಕ್ರಮ ಒತ್ತುವರಿದಾರರ ಜಾಗವನ್ನು ಪಂಚಾಯಿತಿ ಸಮ್ಮುಖದಲ್ಲಿ ಬಿಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರದೇಶದಲ್ಲಿ ಪ್ರತಿ ಸೆಂಟಿಗೆ, ಡೈಮಂಡ್ಕ್ಕಿAತಲೂ ಅಧಿಕ ಬೆಲೆ ಇದೆ. ಹಾಗಾಗಿ ಹೊಳೆಯನ್ನು ಒತ್ತುವರಿ ಮಾಡುವುದು, ನಂತರ ಇದನ್ನು ಮಾರಾಟ ಮಾಡುವುದು ರಾಜಾರೋಷವಾಗಿ ನಡೆಯುತ್ತಿತ್ತು.
ಜಾಗದ ಆಸೆಗಾಗಿ ದಾಖಲೆ ಸರಿ ಇದೆಯೋ, ಇಲ್ಲವೋ ಹೇಗಾದರೂ ಸರಿ ಬೈಪಾಸ್ ಲೇ ಔಟ್ ನಲ್ಲಿ ಒಂದು ಸೈಟ್ ಪಡೆಯಬೇಕು ಎಂದು ಹಟಕ್ಕೆ ಬಿದ್ದು ಅನೇಕ ಮಂದಿ ಇಲ್ಲಿ ಜಾಗ ಖರೀದಿಸಿದ್ದಾರೆ. ನಂತರ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಬೈಪಾಸ್ ರಸ್ತೆಯ ಸಮೀಪದಲ್ಲಿ ಹರಿಯುವ ಕೈತೋಡು ಜಾಗವನ್ನು ಅತಿಕ್ರಮಿಸುವ ಮೂಲಕ ತೋಡಿಗೆ ಕಲ್ಲು ಕಟ್ಟಿ ಒತ್ತುವರಿ ಮಾಡಿಕೊಂಡವರೇ ಹೆಚ್ಚು.
ಕೈ ತೋಡಿನ ಬಳಿ ಇರುವ ಜಾಗ ತನ್ನದೆಂದು ವಾದಿಸುವ ಇಲ್ಲಿನ ಜಾಗದ ಮಾಲೀಕರು ತೋಡಿಗೆ ಮಣ್ಣು ಸುರಿದು ಸೈಟ್ ಗಳಾಗಿ ಪರಿವರ್ತನೆ ಮಾಡಿದ್ದಾರೆ.
ಇದೀಗ ಸರ್ವೆ ಕಾರ್ಯ, ಹೊಳೆಯ ಗಡಿ ಗುರುತು ಕೂಡ ಮುಕ್ತಯವಾಗಿದ್ದು ಕೈತೋಡು ಅಕ್ಕ - ಪಕ್ಕದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿಕೊಂಡಿರುವವರ ಎದೆಯಲ್ಲಿ ಢವ..ಢವ..ಹೆಚ್ಚಾಗಿದೆ. ಮೇಲ್ನೋಟಕ್ಕೆ ಬಹುತೇಕ ಮಂದಿ ಕೈತೋಡು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿಕೊಂಡಿರುವುದು ಕಂಡುಬAದಿದೆ.