ಮಡಿಕೇರಿ, ಜೂ. ೧೧: ನಗರದ ದಾಸವಾಳ ರಸ್ತೆಯಲ್ಲಿ ಒಣಕಸ ವಿಲೇವಾರಿ ಘಟಕ ಮಾಡುವ ಬದಲು ಉದ್ಯಾನವನ ಮಾಡುವಂತೆ ಉಸ್ತುವಾರಿ ಸಚಿವ ವಿ.ಸೋಮಣ್ಣ ನಿರ್ದೇಶನ ನೀಡಿದರು.
ಈ ಬಗ್ಗೆ ಹಲವು ವರ್ಷಗಳಿಂದ ಪ್ರಸ್ತಾಪ ಇದ್ದು, ಅದನ್ನು ಸ್ಥಳೀಯರು ಆಕ್ಷೇಪಿಸಿದ್ದರು. ಪ್ರಜಾಪಿತ ಬ್ರಹ್ಮಕುಮಾರಿಸ್ ವಿದ್ಯಾಲಯ ಕೂಡ ಇದನ್ನು ವಿರೋಧಿಸಿ ಸಚಿವರಿಗೆ ಪತ್ರ ಬರೆದಿದ್ದರು.
(ಮೊದಲ ಪುಟದಿಂದ) ಸಚಿವ ಸೋಮಣ್ಣ ಸ್ಥಳಕ್ಕೆ ಭೇಟಿ ನೀಡಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅನುದಾನವಿದ್ದು ಅದನ್ನು ಬಳಸಿಕೊಂಡು ಉತ್ತಮವಾದ ಉದ್ಯಾನ ನಿರ್ಮಿಸುವಂತೆ ಸೂಚಿಸಿದರು.
ಕಸ ವಿಲೇವಾರಿ ಘಟಕ ವಿರೋಧಿಸಿ ನಗರಸಭೆ ಸದಸ್ಯರಾದ ಅಮೀನ್ ಮೊಹ್ಸಿನ್, ನೀಮಾ ಹರ್ಷದ್, ಬ್ರಹ್ಮಕುಮಾರಿಯ ಧನಲಕ್ಷಿö್ಮ, ಉಮಾಮಹೇಶ್ವರ್, ರಂಗನಾಥ್, ಗಣೇಶ್, ರಾಜೇಶ್ ಸೇರಿದಂತೆ ಇನ್ನಿತರರು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ತಕ್ಷಣ ಸ್ಪಂದಿಸಿದ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಈ ಸಂದರ್ಭ ಶಾಸಕರಾದ ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ನಗರಸಭೆ ಪೌರಾಯುಕ್ತ ರಾಮದಾಸ್, ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ ಇದ್ದರು.