ಗೋಣಿಕೊಪ್ಪ ವರದಿ, ಜೂ. ೧೦: ಎರಡು ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಅರಣ್ಯಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು, ಗ್ರಾಮಗಳಲ್ಲೇ ಓಡಾಡುತ್ತಿವೆ. ಅರಣ್ಯ ಸೇರಿವೆ ಎಂದು ನಂಬಿದ್ದ ಜನತೆ ರಾತ್ರಿಯಿಡೀ ಭಯದಲ್ಲಿ ಕಳೆಯುವಂತಾಗಿದೆ.
ಮಾಯಮುಡಿ, ಬಾಳಾಜಿ, ಮಾನಿಕೊಪ್ಪ, ಮತ್ತೂರು ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಆನೆಗಳು ಅರಣ್ಯ ಸೇರಿವೆ ಎಂಬ ತಪ್ಪು ಮಾಹಿತಿಯಿಂದ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ತೋಟ, ಗದ್ದೆಗಳಲ್ಲೇ ಆನೆಗಳು ಸುತ್ತಾಡುತ್ತಿವೆ.
ಮಂಗಳವಾರ ಮಾನಿಕೊಪ್ಪದಲ್ಲಿ ಸೇರಿಕೊಂಡಿದ್ದ ೧೩ ಆನೆಗಳ ಹಿಂಡು ಕತ್ತಲು ಆಗುತ್ತಿದ್ದಂತೆ ತೋಟದಲ್ಲಿ ಮರೆಯಾಗಿತ್ತು. ಇದರಿಂದ ಅರಣ್ಯಕ್ಕೆ ಅಟ್ಟಲು ಆಗಿರಲಿಲ್ಲ. ಗೋಣಿಕೊಪ್ಪ-ಮಾಯಮುಡಿ ರಸ್ತೆ, ಮೈಸೂರು-ಗೋಣಿಕೊಪ್ಪ ಹೆದ್ದಾರಿ ದಾಟಿಹೋಗಲು ಆಗಿರಲಿಲ್ಲ. ಇದರಿಂದಾಗಿ ಮಂಗಳವಾರ ಕಾರ್ಯಾಚರಣೆ ನಡೆಸಿದ್ದರೂ ಪೂರ್ತಿ ಯಶಸ್ವಿಯಾಗಿಲ್ಲ. ಪೊನ್ನಂಪೇಟೆ ವಲಯ ಅರಣ್ಯ ವ್ಯಾಪ್ತಿಯಿಂದ ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೆ ಆನೆಗಳನ್ನು ಅಟ್ಟುವಲ್ಲಿ ಮಾತ್ರ ಯಶಸ್ವಿಯಾದಂತಾಗಿದ್ದು, ತಿತಿಮತಿ ವಲಯ ವ್ಯಾಪ್ತಿಯ ಬಾಳಾಜಿ ಗ್ರಾಮದಲ್ಲಿ ಆನೆಗಳು ಉಳಿದುಕೊಂಡಿವೆ ಎನ್ನಲಾಗಿದೆ.
ಬುಧವಾರ ಪೊನ್ನಂಪೇಟೆ ರಸ್ತೆಯ ಜೋಡುಬೀಟಿ ಎಂಬಲ್ಲಿ ಹಿಂಡು ಪ್ರತ್ಯಕ್ಷವಾಗಿದ್ದು, ನಂತರ ಬಾಳಾಜಿ ಗ್ರಾಮದ ಕೀರೆಹೊಳೆ ದಂಡೆಯಲ್ಲಿ ಸೇರಿಕೊಂಡಿವೆ. ಮತ್ತೂರು ಗ್ರಾಮದಲ್ಲಿ ಕೂಡ ಆನೆಗಳು ಬೀಡುಬಿಟ್ಟಿದ್ದು, ಅರಣ್ಯ ಇಲಾಖೆ ಕಾಡಿಗೆ ಆನೆಗಳನ್ನು ಸೇರಿಸಲಾಗಿದೆ ಎಂದು ನೀಡಿರುವ ತಪ್ಪು ಮಾಹಿತಿಯಿಂದ ಜನರು ಗೊಂದಲದಲ್ಲಿದ್ದಾರೆ.
ಕಾಡಿಗೆ ಅಟ್ಟುವ ಕಾರ್ಯಾಚರಣೆ ವಿಫಲವಾಗುತ್ತಿದ್ದು, ಇಲಾಖೆ ದಿನದೂಡುವ ಕೆಲಸವಷ್ಟೆ ಮಾಡುತ್ತಿದೆ. ಹೊಳೆದಂಡೆಯಲ್ಲಿ ಬಿಟ್ಟು ಹೋಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಿತಿಮತಿ ಆರ್ಎಫ್ಓ ಅಶೋಕ್, ಆನೆಗಳು ಮತ್ತೆ ಗ್ರಾಮಕ್ಕೆ ಬಂದಿವೆ. ಈ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.