ಕೊಡ್ಲಿಪೇಟೆ, ಜೂ.೧೧: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುತ್ತಿರುವ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದು, ಇದನ್ನು ನಿರ್ಬಂಧಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ಕೊಡ್ಲಿಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಸ್ಥಳೀಯ ಹೇಮಾವತಿ ನದಿಯಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗುತ್ತಿಗೆ ಪಡೆದು ಗಣಿಗಾರಿಕೆ ನಡೆಸುವವರು ಅಕ್ರಮವಾಗಿ ಹಿಟಾಚಿ ಮತ್ತು ಮೋಟಾರ್ ಬೋಟ್ಗಳನ್ನು ನದಿಗೆ ಇಳಿಸಿ ಕಾನೂನು ಬಾಹಿರವಾಗಿ ಮರಳು ತೆಗೆಯುತ್ತಿರುವುದರಿಂದ ಕುಡಿಯುವ ನೀರು ಕಲುಷಿತವಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು.
ಅಕ್ರಮ ಮರಳುಗಾರಿಕೆಯ ಬಗ್ಗೆ ಈ ಹಿಂದೆಯೇ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ಆದರೂ ಈ ಬಗ್ಗೆ ಗಮನ ಹರಿಸಿಲ್ಲ. ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಎಲ್ಲಾ ಮರಳು ಬ್ಲಾಕ್ಗಳ ಟೆಂಡರ್ ರದ್ದುಗೊಳಿಸಿ ಸಂಪೂರ್ಣವಾಗಿ ನಿರ್ಬಂಧಿಸುವAತೆ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಲು ಗ್ರಾ.ಪಂ.ಸರ್ವ ಸದಸ್ಯರುಗಳ ಸಭೆಯಲ್ಲಿ ನಿರ್ಣಯ ಕ್ಯೆಗೊಳ್ಳಲಾಯಿತು. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸದೆ ಗಣಿಗಾರಿಕೆಗೆ ಅವಕಾಶ ನೀಡಿದರೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
ಕಳೆದ ಮೂರು ದಿನಗಳ ಹಿಂದೆ ನದಿಗೆ ಬಿದ್ದು ಸಾವನ್ನಪ್ಪಿದ ಪಂಚಾಯತ್ ಗುತ್ತಿಗೆ ನೌಕರ ಮಣಿಮುತ್ತು ಕುಟುಂಬಕ್ಕೆ ಧನಸಹಾಯ ಹಾಗೂ ಪತ್ನಿಗೆ ಪಂಚಾಯತ್ನಲ್ಲಿ ಕೆಲಸ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೊತ್ಸಾಹ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಗ್ರಾ.ಪಂ.ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ನಿಯಂತ್ರಣಕ್ಕೆ ಕ್ರಮ ಕ್ಯೆಗೊಳ್ಳಲು ಜಿಲ್ಲಾಧಿಕಾರಿಗಳು ಪಂಚಾಯತ್ಗೆ ನಿರ್ದೇಶನ ನೀಡಿದ್ದಾರೆ. ಕೋವಿಡ್ ಕಾರ್ಯಪಡೆ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿ ಕಟ್ಟುನಿಟ್ಟಿನ ನಿಯಮ ಪಾಲನೆಗೆ ಕ್ರಮ ವಹಿಸಲಾಗುವುದು ಎಂದು ಪಿಡಿಓ ಹರೀಶ್ ಹೇಳಿದರು.
ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗದೆ ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿರುವ ಮಂದಿ ೧೪ ದಿನಕ್ಕೆ ಮುಂಚಿತವಾಗಿಯೇ ಹೊರಗೆ ಸುತ್ತಾಡುವುದು ಕಂಡುಬರುತ್ತಿದ್ದು, ಇಂತಹವರ ವಿರುದ್ಧ ಪೊಲೀಸ್ ದೂರು ನೀಡಲು ತೀರ್ಮಾನಿಸಲಾಯಿತು.
ಪಂಚಾಯತ್ ವ್ಯಾಪ್ತಿಯ ಕೆಲವು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಸೋಂಕಿತರು ಸಹ ಖರೀದಿಗೆ ಹೋಗುತ್ತಿದ್ದಾರೆ. ಇದರಿಂದಾಗಿ ಸೋಂಕು ಹೆಚ್ಚಾಗುತ್ತಿದೆ. ಇಂತಹ ಅಕ್ರಮಕ್ಕೆ ಅಬಕಾರಿ ಇಲಾಖೆ ಕಡಿವಾಣ ಹಾಕಬೇಕು ದೊಡ್ಡಕೊಡ್ಲಿ ಗ್ರಾಮದ ಕೆಲಕೊಡ್ಲಿ ಮುಖ್ಯ ರಸ್ತೆಯ ಸಮೀಪವಿರುವ ತಾಲಿಬ್ ಎಂಬುವವರ ಜಾಗದಲ್ಲಿ, ದೊಡ್ಡ ಪ್ರಮಾಣದ ಇಟ್ಟಿಗೆ ಗೂಡು ನಿರ್ಮಿಸಿ ಬೆಂಕಿ ಹಾಕುವುದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಅರ್ಜಿ ಸಲ್ಲಿಸಿರುವ ಬಗ್ಗೆ ಚರ್ಚೆ ನಡೆದು, ಸಂಬAಧಪಟ್ಟವರಿಗೆ ನೋಟೀಸ್ ನೀಡಿ ಸ್ಥಗಿತಗೊಳಿಸಲು ಸೂಚಿಸುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ತ್ಯಾಗರಾಜ್, ಸದಸ್ಯರುಗಳಾದ ವಹಾಬ್, ಹನೀಫ್ ಕಿರಿಕೊಡ್ಲಿ, ಶೋಭಿತ್ ಪ್ರಸನ್ನ, ಮುತ್ತಯ್ಯ, ನಗೀನಾ ಭಾನು, ಲಾವಣ್ಯ, ಅಶ್ವಿನಿ, ಅಪ್ಸರಿ ಬೇಗಂ, ಸುನಂದ, ಕವಿತಾ, ಯಶೋಧ ಅವರುಗಳು ಸಭೆಯಲ್ಲಿ ಹಾಜರಿದ್ದರು.