ಮಡಿಕೇರಿ, ಜೂ. ೧೧: ಹೋಂ ಐಸೋಲೇಷನ್ನಲ್ಲಿರುವ ಕೋವಿಡ್ ಸೋಂಕಿತರು ನಿಯಮ ಪಾಲಿಸದೆ ಸಾರ್ವಜನಿಕ ಪ್ರದೇಶದಲ್ಲಿ ಸಂಚರಿಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಸೋಂಕಿತರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ಆದೇಶಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕೋವಿಡ್ ಟಾಸ್ಕ್ಫೋರ್ಸ್ ಸಭೆ ಹಾಗೂ ಮಳೆಗಾಲ ಸಂಬAಧ ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ಶೇ. ೧೦ ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರೆಸಲು ಈಗಾಗಲೇ ಮುಖ್ಯಮಂತ್ರಿ ಘೋಷಿಸಿದ್ದು, ಕೊಡಗು ಜಿಲ್ಲೆಯಲ್ಲಿಯೂ ಕೂಡ ಮುಂದಿನ ೧೦ ದಿನಗಳ ಕಾಲ ಬಿಗಿಕ್ರಮ ಮುಂದುವರೆಯಲಿದೆ. ಜಿಲ್ಲಾಡಳಿತ ಹಾಗೂ ಸರಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಿ ಕೋವಿಡ್ ಮುಕ್ತ ಜಿಲ್ಲೆ ಮಾಡಲು ಸಹಕಾರ ನೀಡಬೇಕು. ಕೊಡಗಿನ ನೆರೆಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ, ಹಾಸನದಲ್ಲಿ ಕೋವಿಡ್ ಪ್ರಮಾಣ ಹೆಚ್ಚಿರುವ ಹಿನ್ನೆಲೆ ಕೊಡಗಿನ ಜನರು ಸೂಕ್ತ ಮುಂಜಾಗ್ರತೆ ವಹಿಸಬೇಕು. ಕೋವಿಡ್ ದೃಢಪಟ್ಟು ಹೋಂ ಐಸೋಲೇಷನ್ನಲ್ಲಿರುವವರು ನಿಯಮ ಉಲ್ಲಂಘಿಸಿ ಸಂಚರಿಸುತ್ತಿ ರುವುದು ಆತಂಕಕಾರಿ ಬೆಳವಣಿಗೆ ಯಾಗಿದೆ. ಇದನ್ನು ತಡೆಯಲು ಟಾಸ್ಕ್ಫೋರ್ಸ್ ಸಮಿತಿ ಕಾರ್ಯೋ ನ್ಮುಖಗೊಳ್ಳಬೇಕು ಎಂದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಹೋಂ ಐಸೋಲೇಷನ್ ಆಗಬೇಕಾದರೆ ಮನೆಯಲ್ಲಿ ಪ್ರತ್ಯೇಕ ಕೋಣೆ, ಶೌಚಾಲಯ, ಸ್ನಾನಗೃಹವಿರಬೇಕು. ಯಾವುದೇ ವ್ಯವಸ್ಥೆ ಇಲ್ಲದವರು ಕಡ್ಡಾಯವಾಗಿ ಆರೈಕೆ ಕೇಂದ್ರಕ್ಕೆ ದಾಖಲಾಗಬೇಕು. ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸುವಂತೆ ನಿರ್ದೇಶನ
ನೀಡಿದರು.(ಮೊದಲ ಪುಟದಿಂದ)
ವೈದ್ಯಕೀಯ ಸಿಬ್ಬಂದಿಗಳಿಗೆ ವೇತನ ನೀಡಿ
ಪ್ರಸ್ತುತ ಪರಿಸ್ಥಿತಿಯಲ್ಲಿ ವೈದ್ಯಕೀಯ ಸೇವೆ ನೀಡಲು ಮುಂದೆ ಬಂದಿರುವ ಶುಶ್ರೂಷಕಿ ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳಿಗೆ ಸಮರ್ಪಕವಾಗಿ ವೇತನ ನೀಡಿ. ಈಗಾಗಲೇ ವಿವಿಧ ಮೂಲಗಳಿಂದ ಅನುದಾನ ಇರುವುದರಿಂದ ಅದನ್ನು ಬಳಸಿಕೊಳ್ಳಿ. ಅನುದಾನ ಕೊರತೆಯಾದರೆ ಸರಕಾರ ಹಣ ಬಿಡುಗಡೆ ಮಾಡಲಿದೆ ಎಂದು ವಿ.ಸೋಮಣ್ಣ ಭರವಸೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಮಾತನಾಡಿ, ಜಿಲ್ಲೆಗೆ ನಿಯೋಜನೆ ಯಾಗಿರುವ ೧೬ ವೈದ್ಯರ ಪೈಕಿ ೭ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೂವರು ಎರಡು ದಿನಗಳಲ್ಲಿ ಹಾಜರಾಗುತ್ತಾರೆ. ೧೬ ಶುಶ್ರೂಷಕಿಯರನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ನರ್ಸ್ಗಳಿಗೆ ವೇತನ ನೀಡಲು ಸರಕಾರದ ಮಟ್ಟದಲ್ಲಿ ಆದೇಶವಾಗಬೇಕಾಗಿದೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವರು, ಜಿಲ್ಲಾಡಳಿತದಲ್ಲಿರುವ ಅನುದಾನವನ್ನು ಬಳಸಿ ಸಂಬಳ ನೀಡಿ. ೨ ದಿನದಲ್ಲಿ ಸಮಸ್ಯೆ ಬಗೆಹರಿಯಬೇಕು. ಪರಿಸ್ಥಿತಿ ಅರ್ಥೈಸಿಕೊಂಡು ಕೆಲಸ ನಿರ್ವಹಿಸುವಂತೆ ಹೇಳಿದರು. ಶಾಸಕ ಬೋಪಯ್ಯ ಮಾತನಾಡಿ, ಎಸ್ಡಿಆರ್ಎಫ್ ನಿಧಿ ಬಳಸಿ ವೇತನ ನೀಡುವಂತೆ ಸಲಹೆ ನೀಡಿದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ನರ್ಸ್ಗಳ ನಿಯೋಜನೆಗೆ ಕ್ರಮವಹಿಸಿ, ವಾಕ್ ಇನ್ ಸಂದರ್ಶನ ಮಾಡುವಂತೆ ನಿರ್ದೇಶಿಸಿದರು.
ವೀರಾಜಪೇಟೆಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗುತ್ತಿದೆ ಎಂದು ಸಭೆಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕೆ.ಜಿ ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಆರೋಗ್ಯ ಕಾರ್ಯಕರ್ತರೊಂದಿಗೆ ಗಲಾಟೆ - ಕ್ರಮಕ್ಕೆ ಸೂಚನೆ
ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ಟಾಸ್ಕ್ಫೋರ್ಸ್ ಸದಸ್ಯರೊಂದಿಗೆ ಗಲಾಟೆ ಮಾಡಿದವರ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಸಚಿವ ವಿ.ಸೋಮಣ್ಣ ಅವರು ಸೂಚನೆ ನೀಡಿದರು.
ಹರದೂರು ಹಾಗೂ ಹಾನಗಲ್ನಲ್ಲಿ ಈ ರೀತಿಯ ಘಟನೆ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಿ. ಸೋಂಕಿತರ ಆರೋಗ್ಯ ವಿಚಾರಿಸಲು ತೆರಳುವ ಕಾರ್ಯಕರ್ತರಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಿ. ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರವಹಿಸಬೇಕು ಎಂದರು.
ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷö್ಯ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಆರೋಪಿಸಿದರು. ಕೋವಿಡ್ ಲಕ್ಷಣವಿರುವವರಿಗೆ ಮೊದಲು ಕೋವಿಡ್ ಪರೀಕ್ಷೆ ಮಾಡಿಸದೆ ಚಿಕಿತ್ಸೆ ನೀಡಿದ ಪರಿಣಾಮ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ದೂರಿದರು.
ನಾಪೋಕ್ಲಿನಲ್ಲಿ ಆರೈಕೆ ಕೇಂದ್ರ ತೆರೆಯುವಂತೆ ಮನವಿ
ಮಳೆಗಾಲದಲ್ಲಿ ನಾಪೋಕ್ಲು ವ್ಯಾಪ್ತಿ ಸುತ್ತಮುತ್ತಲಿನ ಗ್ರಾಮಗಳು ರಸ್ತೆ ಸಂಪರ್ಕ ಕಳೆದುಕೊಳ್ಳುವುದರಿಂದ ನಾಪೋಕ್ಲಿನಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಬೇಕೆಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮನವಿ ಮಾಡಿದರು. ಜೊತೆಗೆ ಮಡಿಕೇರಿಯ ದಾಸವಾಳ ರಸ್ತೆಯಲ್ಲಿ ಒಣಕಸ ವಿಲೇವಾರಿ ಘಟಕ ಮಾಡಲು ಸಾರ್ವಜನಿಕರ ಆಕ್ಷೇಪವಿದೆ. ಯಾವುದೇ ಕಾರಣಕ್ಕೂ ಅಲ್ಲಿ ಘಟಕ ಆರಂಭಿಸಬಾರದು ಎಂದು ಒತ್ತಾಯಿಸಿದರು.
ಎಂಎಲ್ಸಿ ಸುನಿಲ್ ಸುಬ್ರಮಣಿ ಮಾತನಾಡಿ, ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ಮಟ್ಟ ಹಾಕಲು ಕ್ರಮವಹಿಸಿ. ಶನಿವಾರಸಂತೆ, ಕುಶಾಲನಗರ, ಮಡಿಕೇರಿ ಗ್ರಾಮಾಂತರ ಉಪನಿರೀಕ್ಷಕರಿಗೆ ವಾಹನ ವ್ಯವಸ್ಥೆ ಕಲ್ಪಿಸುವಂತೆ ಸಚಿವರ ಗಮನ ಸೆಳೆದರು.
೧೫ ದಿನಕ್ಕೊಮ್ಮೆ ಸಭೆ ನಡೆಸಿ
೧೫ ದಿನಕ್ಕೊಮ್ಮೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸುವಂತೆ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ಸಭೆಗಳಿಂದ ಸಮಸ್ಯೆಗಳು ಕ್ಷಿಪ್ರಗತಿಯಲ್ಲಿ ಪರಿಹಾರವಾಗುತ್ತೆ. ಸಭೆ ಇದಕ್ಕೆ ಸಹಕಾರಿಯಾಗಲಿದೆ ಎಂದರು.
ಅಧಿಕಾರಿಗಳು ಇದೀಗ ಬದಲಾಗಿದ್ದಾರೆ. ಚುರುಕುತನದಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಕೆಲಸ ಮಾಡುವಂತೆ ಹೇಳಿದರು.
ಕಾರ್ಮಿಕರ ಸಾಗಾಟ - ತಾ. ೨೧ರ ನಂತರ ನಿರ್ಧಾರ
ತೋಟ ಕಾರ್ಮಿಕರ ಸಾಗಾಟ ಸಂಬAಧಿಸಿದAತೆ ತಾ. ೨೧ರ ಬಳಿಕ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ವಿ.ಸೋಮಣ್ಣ ಹೇಳಿದರು.
ತೋಟಕ್ಕೆ ಕಾರ್ಮಿಕರನ್ನು ಕರೆದುಕೊಂಡು ಹೋಗಬೇಕಾದಲ್ಲಿ ಸರಕಾರದ ನಿಯಮವನ್ನು ಪಾಲಿಸಬೇಕು. ಚಾಲಕರು, ಕಾರ್ಮಿಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಾಹನದಲ್ಲಿರುವ ಸೀಟ್ನ ಶೇ. ೫೦ ರಷ್ಟು ಕಾರ್ಮಿಕರು ಮಾತ್ರ ಇರಬೇಕೆಂದು ಚರ್ಚಿಸಲಾಯಿತು.
ಲಾಕ್ಡೌನ್ ಮುಗಿದು ಕೊರೊನಾ ಪರಿಸ್ಥಿತಿ ಹತೋಟಿಗೆ ಬಂದರೆ ಈ ಬಗ್ಗೆ ಜಿಲ್ಲಾಡಳಿತ ಜನಪ್ರತಿನಿಧಿಗಳ ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಹಾಜರಿದ್ದರು.