ವೀರಾಜಪೇಟೆ, ಜೂ. ೧೧: ಲಾಕ್ಡೌನ್ ಸಂದರ್ಭವನ್ನು ಉಪಯೋಗಿಸಿಕೊಂಡು ವೀರಾಜಪೇಟೆ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಹಗಲು ದರೋಡೆ ನಡೆಸುತ್ತಿದ್ದು ದುಬಾರಿ ದರಕ್ಕೆ ಕೊಳೆತ ಮೀನು ವಿತರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಾ. ೧೧ರ ಬೆಳಿಗ್ಗೆ ಅಂಗಡಿಯಲ್ಲಿ ಒಂದು ಕೆ.ಜಿ ಮತ್ತಿ ಮೀನನ್ನು ೨೬೦ ರೂಗಳಿಗೆ ಖರೀದಿಸಲಾಗಿದೆ. ಮನೆಯಲ್ಲಿ ಬಂದು ಶುಚಿ ಗೊಳಿಸುವಾಗ ಕೊಳೆತು ಹೋಗಿರುವುದು ಗೊತ್ತಾಗಿದೆ. ಸರ್ಕಾರ ಲಾಕ್ಡೌನ್ ಹೇರಿರುವ ದರಿಂದ ವಾರದ ಮೂರು ದಿನಗಳ ಕಾಲ ಬೆಳಿಗ್ಗೆ ೬ ರಿಂದ ೧ ಗಂಟೆಯವರೆಗೆ ವ್ಯಾಪಾರ ಮಾಡಲು ಅವಕಾಶ ಮಾಡಿ ಕೊಟ್ಟಿದೆ. ಇದನ್ನು ದುರುಪಯೋಗ ಪಡಿಸಿಕೊಂಡ ಕೆಲ ವರ್ತಕರು ಬಡವರ ಆರ್ಥಿಕ ಪರಿಸ್ಥಿತಿಯನ್ನು ಅರಿತುಕೊಂಡು ಮನಸೋಇಚ್ಚೆ ದರ ಏರಿಕೆ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ.
ಬೆಳಿಗ್ಗೆ ೫ ಗಂಟೆಗೆ ಕೇರಳದಿಂದ ಮೀನು ಮಾರುಕಟ್ಟೆಗೆ ಬರುತ್ತದೆ. ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿ ಸ್ಥಳಕ್ಕೆ ತೆರಳಿ ಮೀನುಗಳನ್ನು ಪರಿಶೀಲನೆ ಮಾಡಿ ಮೀನು ತಿನ್ನಲು ಯೋಗ್ಯವೇ ಎಂದು ದೃಢೀಕರಣ ಮಾಡಬೇಕು. ಪಟ್ಟಣ ಪಂಚಾಯಿತಿಯಲ್ಲಿ ಆರೋಗ್ಯ ಅಧಿಕಾರಿ ಯಾರೆಂಬುದೇ ಜನರಿಗೆ ತಿಳಿದಿಲ್ಲ. ಲಾಕ್ಡೌನ್ ಇರುವುದರಿಂದ ಮಾರಾಟವಾಗದ ಮೀನುಗಳನ್ನು ಶಿಥಿಲೀಕರಣ ಪೆಟ್ಟಿಗೆಯಲ್ಲಿಟ್ಟು ಎರಡು ದಿನ ಕಳೆದು ಮಾರಾಟ ಮಾಡುವುದರಿಂದ ಇಂತಹ ಪರಿಸ್ಥಿತಿ ಎದುರಾಗುತ್ತಿದೆ. ಪಕ್ಕದ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದು ಇದೇ ಮತ್ತಿ ಮೀನಿನ ಬೆಲೆ ೧೮೦ ರೂ.ಗಳಾಗಿದ್ದು, ಪಟ್ಟಣದಲ್ಲಿ ೨೬೦ ರೂಗಳಲ್ಲಿ ಮಾರಾಟವಾಗುತ್ತಿದೆ. ಮುಖ್ಯಾಧಿಕಾರಿ ಗಳು ಕೂಡಲೇ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಅವರು ಆಗ್ರಹಿಸಿದ್ದಾರೆ.