ಮಡಿಕೇರಿ, ಜೂ. ೧೦: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವವರಿಗೆ ರಾಜ್ಯ ಸರಕಾರ ಘೋಷಣೆ ಮಾಡಿರುವ ಪರಿಹಾರ ಧನ ಪಡೆಯಲು ಫಲಾನುಭವಿಗಳು ತಾವೇ ಹಣ ಪಾವತಿಸುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರದಿಂದ ಲಭ್ಯವಾಗುವ ಕನಿಷ್ಟ ದರ ಸುಮಾರು ೨, ೩ ಸಾವಿರ ಹಣ ಪಡೆಯಲು ಫಲಾನುಭವಿಗಳು ರೂ.೨೦೦ರಷ್ಟು ಸೇವಾ ಶುಲ್ಕವನ್ನು ಸೈಬರ್ ಸೆಂಟರ್‌ಗಳಿಗೆ ಪಾವತಿಸುವುದು ಸರಿಯೇ ಎಂಬುದಾಗಿ ಹಲವು ಫಲಾನುಭವಿಗಳು ತಮ್ಮ ಅಳಲನ್ನು ಪತ್ರಿಕೆಯೊಂದಿಗೆ ತೋಡಿ ಕೊಂಡಿದ್ದಾರೆ. ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶೀಲನೆ ನಂತರ ತಾವುಗಳು ದಾಖಲಾತಿಗಳೊಂದಿಗೆ ನೀಡಿರುವ ಬ್ಯಾಂಕ್ ಖಾತೆಗೆ ಹಣ ಜಮಾವಾಗುತ್ತದೆ. ಆದರೆ ಬಹಳಷ್ಟು ಮಂದಿ ಫಲಾನುಭವಿಗಳು ಕಂಪ್ಯೂಟರ್ ಬಳಕೆಯಲ್ಲಿ ಪರಿಣಿತರಲ್ಲದ ಕಾರಣ ಸೈಬರ್ ಸೆಂಟರ್‌ಗಳಿಗೆ ತೆರಳಿ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಸಹಾಯ ಪಡೆದು ಕೊಳ್ಳುತ್ತಾರೆ.

(ಮೊದಲ ಪುಟದಿಂದ) ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಇಂತಹ ಸೆಂಟರ್‌ಗಳು ರೂ.೨೦೦ ರಷ್ಟು ಸೇವಾ ಶುಲ್ಕವನ್ನು ಪಡೆದುಕೊಳ್ಳುತ್ತವೆೆ. ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಧನ ಕೇವಲ ರೂ. ೨,೦೦೦ ಇದ್ದು, ಇದರಲ್ಲಿ ರೂ.೨೦೦ ಕಳೆದುಕೊಂಡರೆ ಪರಿಹಾರ ಯಾವ ಮೂಲೆಗೂ ಸಾಲದ್ದು. ಇಂತಹ ಸೈಬರ್ ಸೆಂಟರ್‌ಗಳು ಜಿಲ್ಲೆಯಲ್ಲಿ ಹಲವಷ್ಟಿವೆ. ಎಲ್ಲಾ ಸೆಂಟರ್‌ಗಳಲ್ಲಿಯೂ ಒಂದೇ ರೀತಿಯ ಕನಿಷ್ಟ ಸೇವಾ ಶುಲ್ಕ ನಿಗದಿಪಡಿಸುವಂತೆ ಫಲಾನುಭವಿಗಳು ಪತ್ರಿಕೆಯ ಮೂಲಕ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.