ಮಡಿಕೇರಿ, ಜೂ. ೧೧: ಮಳೆಗಾಲ ಎದುರಿಸಲು ಸಕಲ ರೀತಿಯಲ್ಲಿ ಜಿಲ್ಲಾಡಳಿತ ಸನ್ನದ್ಧಗೊಂಡಿದ್ದು, ಸೂಕ್ತ ಮುಂಜಾಗ್ರತ ಕ್ರಮಕೈಗೊಳ್ಳಲಾಗಿದೆ ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಜಿ.ಪಂ ಭವನದಲ್ಲಿ ನಡೆದ ಮಳೆಗಾಲ ಮುಂಜಾಗ್ರತ ಸಭೆಯಲ್ಲಿ ಮಾತನಾಡಿದ ಅವರು, ಸೂಕ್ಷö್ಮ ಪ್ರದೇಶದಲ್ಲಿ ವಾಸಿಸುತ್ತಿರುವುವರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಕಾಳಜಿ ತೆರೆಯಲು ಕ್ರಮವಹಿಸಲಾಗುತ್ತದೆ. ಕೊರೊನಾ ಪರಿಸ್ಥಿತಿ ಹಿನ್ನೆಲೆ ಆರೈಕೆ ಕೇಂದ್ರಕ್ಕೆ ದಾಖಲಾಗುವ ಮೊದಲು ಕೋವಿಡ್ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಪರೀಕ್ಷಿಸಲಾಗುವುದು ಎಂದರು.

೭೭ ಸೂಕ್ಷö್ಮ ಪ್ರದೇಶ

ಜಿಲ್ಲೆಯ ೫೫ ಪಂಚಾಯ್ತಿ ವ್ಯಾಪ್ತಿಯ ೭೭ ಗ್ರಾಮಗಳನ್ನು ಸೂಕ್ಷö್ಮ ಪ್ರದೇಶವೆಂದು ಗುರುತಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮಾಹಿತಿ ನೀಡಿದರು. ಗುರುತಿಸಿರುವ ಪ್ರದೇಶದ ೧೮೨೮ ಕುಟುಂಬಗಳನ್ನು ಸ್ಥಳಾಂತರ ಮಾಡಲು ಕ್ರಮವಹಿಸಲಾಗಿದೆ. ಪ್ರತಿ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲು ಕ್ರಮ ವಹಿಸಲಾಗಿದೆ. ಪ್ರಾಕೃತಿಕ ವಿಕೋಪ ಸಂಭವಿಸಿದರೆ ೬೧೮ ಜಾನುವಾರುಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ ಎಂದು ಗುರುತಿಸಿದ್ದು, ೧೭ ಗೋಶಾಲೆ ತೆರೆಯಲು ಕ್ರಮಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ವಿವರಿಸಿದರು.