ಮಡಿಕೇರಿ, ಜೂ. ೧೧: ಮಾನಸಿಕವಾಗಿ ತೊಂದರೆ ಗೀಡಾಗಿರುವ ವ್ಯಕ್ತಿ ಎಲ್ಲಿಂದಲೋ ನಡೆದುಕೊಂಡು ಬರುತ್ತಿದ್ದ ಬೆನ್ನಲ್ಲಿ ಮಣಭಾರದ ಮೂಟೆಯೊಂದಿತ್ತು. ಲಾಕ್ ಡೌನ್ ಕಾರಣ ಕುಡಿಯಲು ನೀರು ಕೂಡ ಸಿಕ್ಕಿರಲಿಲ್ಲ. ಅದಾಗಲೇ ಬಳಲಿ ಬೆಂಡಾಗಿದ್ದ ಈತ ಬಾಯಾರಿಕೆಯಿಂದ ಏದುಸಿರು ಬಿಡಲಾರಂಭಿಸಿದ. ಈತನ ಪರಿಸ್ಥಿತಿಯ ಗಂಭೀರತೆ ಯನ್ನರಿತ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಕೂಡಲೇ ಧಾವಿಸಿ ಬಂದು ತಮ್ಮಲ್ಲಿದ್ದ ಬಾಟಲಿಯಿಂದ ನೀರನ್ನು ಕುಡಿಯಲು ಕೊಟ್ಟರು. ಆದರೆ ಸ್ವತಃ ನೀರು ಕುಡಿಯಲಾರದಷ್ಟು ನಿಶಕ್ತನಾಗಿದ್ದರಿಂದ ತಾವೇ ದಣಿವಾರುವಷ್ಟು ನೀರು ಕುಡಿಸಿ ಆತ ಸುಧಾರಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು.

ಈ ಮಾನವೀಯ ಘಟನೆ ನಡೆದಿದ್ದು ಇಂದು ಮಧ್ಯಾಹ್ನ ಕುಶಾಲನಗರದ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿ. ಬಳಲಿದ್ದ ವ್ಯಕ್ತಿಯ ಸಹಾಯಕ್ಕೆ ಬಂದು ಮಾನವೀಯತೆಗೆ ಸಾಕ್ಷಿಯಾದವರು ಕುಶಾಲನಗರ ಟ್ರಾಫಿಕ್ ಪೊಲೀಸ್ ವಿಜಯಕುಮಾರ್ ಹೊಸಮನಿ ಅವರು.

-ಕ್ಯೂಟ್ ಕೂರ್ಗ್ ನ್ಯೂಸ್