ಮಡಿಕೇರಿ,ಜೂ.೧೦; ಮಡಿಕೇರಿ ನಗರದ ಕಸ ವಿಲೇವಾರಿ ಸಮಸ್ಯೆಗೆ ಸಂಬAಧಿಸಿದAತೆ ಈರ್ವರು ತಾಂತ್ರಿಕ ಸರಕಾರಿ ಅಧಿಕಾರಿಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಸುವ ನಿಟ್ಟಿನಲ್ಲಿ ನ್ಯಾಯಾಲಯವು ಅಧಿಕಾರಿಗಳನ್ನು ನೇಮಕ ಮಾಡಿದೆ.

ಕಳೆದ ಹಲವಾರು ವರ್ಷಗಳಿಂದ ಸ್ಟೋನ್‌ಹಿಲ್‌ಬಳಿ ಅವೈಜ್ಞಾನಿಕವಾಗಿ ಸುರಿಯಲಾಗಿರುವ ಕಸದ ರಾಶಿಯನ್ನು ವಿಲೇವಾರಿ ಮಾಡುವ ಬಗ್ಗೆ ಹಾಗೂ ಮುಂಬರುವ ದಿನಗಳಲ್ಲಿ ಅಪಾಯ ಸಂಭವಿಸದAತೆ ಕೈಗೊಳ್ಳಲಾಗಿರುವ ರಕ್ಷಣಾ ಕಾರ್ಯಗಳ ಬಗ್ಗೆ ಮಾಹಿತಿಯೊಂದಿಗೆ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ಮಡಿಕೇರಿ ನಗರಸಭೆಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಸದ ರಾಶಿಯ ಮೇಲೆ ಮಳೆನೀರು ಬೀಳದಂತೆ ಟಾರ್ಪಲಿನ್ ಅಳವಡಿಸಲಾಗಿದೆ. ಮಳೆ ನೀರು ಕಸದ ರಾಶಿಯನ್ನು ಸೇರದಂತೆ ತಡೆಯುವ ನಿಟ್ಟಿನಲ್ಲಿ ಹಾಗೂ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಿಸಲಾಗಿದೆ. ಕಸ ವಿಂಗಡಣೆ ಮಾಡಲಾಗಿದೆ, ಅಲ್ಲದೆ ಸ್ಥಳಕ್ಕೆ ಶಾಸಕರುಗಳು ಭೇಟಿ ನೀಡಿರುವ ಬಗ್ಗೆ ಚಿತ್ರ ಸಹಿತ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಲಾಗಿತ್ತು.

ಈ ಸಂಬAಧ ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರೆದುರು ಅರ್ಜಿದಾರರಾದ ಎಸ್‌ಆರ್‌ವಿಕೆ ಸಂಘದ ಪರ ವಕೀಲರಾದ ಅನುಚಂಗಪ್ಪ ಅವರು ಸುಳ್ಳು ಮಾಹಿತಿಯನ್ನು ಸಲ್ಲಿಸಲಾಗಿದೆ ಎಂದು ಗಮನಕ್ಕೆ ತಂದರು. ಈ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ ಬಗ್ಗೆ ಪ್ರಸ್ತಾಪಿಸಿದರು. ಇದನ್ನು ಗಮನಿಸಿದ ಹಿರಿಯ ನ್ಯಾಯಾಧೀಶ ರಾದ ಅಭಯ್ ಶ್ರೀನಿವಾಸ್ ಒಕ ಅವರು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಈರ್ವರು ತಾಂತ್ರಿಕ ವಿಭಾಗದ ಸರಕಾರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಗ್ರವಾಗಿ ಪರಿಶೀಲಿಸಿ ವಸ್ತುಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅರ್ಜಿದಾರರಾದ ಎಸ್‌ಆರ್‌ವಿಕೆ ಸಂಘದ ಪದಾಧಿಕಾರಿಗಳು, ನಗರಸಭಾ ಆಯುಕ್ತರು ಕೂಡ ಹಾಜರಿರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಈ ಸಂಬAಧದ ಮುಂದಿನ ವಿಚಾರಣೆಯನ್ನು ತಾ.೩೦ಕ್ಕೆ ಕಾಯ್ದಿರಿಸಿದ್ದಾರೆ.

- ಸಂತೋಷ್