ಪೊನ್ನಂಪೇಟೆ, ಜೂ. ೯: ಬಿರುನಾಣಿ ಗ್ರಾಮ ಪಂಚಾಯಿತಿಯು ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ಮುಕ್ತ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿರುನಾಣಿ, ಪರಕಟಗೇರಿ, ತೆರಾಲು, ಬಾಡಗರಕೇರಿ ಹಾಗೂ ಪೊರಾಡು ಎಂಬ ೫ ಗ್ರಾಮಗಳು ಇದ್ದು, ಈಗ ಬಿರುನಾಣಿ ಗ್ರಾಮ ಪಂಚಾಯಿತಿ ಸಂಪೂರ್ಣವಾಗಿ ಕೊರೊನಾ ಮುಕ್ತವಾಗಿದೆ.
ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಕೋವಿಡ್ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷೆ ಬುಟ್ಟಿಯಂಡ ಎಂ. ತಂಗಮ್ಮ, ಉಪಾಧ್ಯಕ್ಷ ಎ.ವಿ. ರಾಜೇಶ್ ಹಾಗೂ ಪಿಡಿಓ ರವಿ ಸದಪ್ಪ ಮೆಟ್ಟಲ ಕೋಡ ಅವರ ಮಾರ್ಗದರ್ಶನದಲ್ಲಿ ಟಾಸ್ಕ್ಫೋರ್ಸ್ ಸಮಿತಿ ಸದಸ್ಯರಾದ ಬಿ.ಕೆ. ನಾಣಯ್ಯ, ಕೆ.ಎಂ. ಮಂಜುಳ, ಎಂ.ಕೆ. ಸರಸ್ವತಿ, ಅಣ್ಣಳಮಾಡ ರಾಯ್ ಚಿಣ್ಣಪ್ಪ, ರೀನಾ ಶಮಿ, ಬೊಟ್ಟಂಗಡ ಈಶ್ವರ, ಹೆಚ್.ಕೆ. ಕಾಳಿಯಮ್ಮ, ಪಿ. ಗೌರಿ, ಪಿ. ಕುಳಿಯ, ಗ್ರಾಮ ಲೆಕ್ಕಾಧಿಕಾರಿ ಸಂತೋಷ್, ಆರೋಗ್ಯ ಕಾರ್ಯಕರ್ತೆ ನಳಿನಿ, ಆಶಾ ಕಾರ್ಯಕರ್ತೆಯರಾದ ಕಳಕಂಡ ವಿಶ್ಮ, ಬಿ.ಎನ್. ಪ್ರೀತು, ಸ್ವಸಹಾಯ ಸಂಘದ ಪ್ರತಿನಿಧಿ ಕೆ.ಕೆ. ಶಕುಂತಲ, ಪೊಲೀಸ್ ಇಲಾಖೆಯ ಚಂದ್ರಶೇಖರ್, ಅಂಗನವಾಡಿ ಕಾರ್ಯಕರ್ತೆಯರಾದ ಉಮಾಕೃಪ, ಬಿ.ಎನ್. ಸಲೀನ ಕುಮಾರಿ ಇವರೆಲ್ಲರ ಶ್ರಮದಿಂದಾಗಿ ಬಿರುನಾಣಿ ಗ್ರಾಮ ಪಂಚಾಯಿತಿ ಕೊರೊನಾ ವಿರುದ್ಧ ಸಮರ ಗೆದ್ದಿದೆ.
ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಟಾಸ್ಕ್ಫೋರ್ಸ್ ಸಮಿತಿಯ ಸದಸ್ಯರ ಶ್ರಮದ ಜೊತೆಗೆ ನಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಕೊರೊನಾ ನಿಯಮಗಳನ್ನು ಬಹಳ ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ನಮಗೆ ಸಂಪೂರ್ಣ ಸಹಕಾರ ನೀಡಿದರು. ಗ್ರಾಮಸ್ಥರ ಸಹಕಾರ ಇಲ್ಲದಿದ್ದರೆ ನಮಗೆ ಕೊರೊನಾವನ್ನು ಇಷ್ಟು ಬೇಗ ಹಿಮ್ಮೆಟ್ಟಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಾನು ನಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಧನ್ಯವಾದ ಸಮರ್ಪಿಸುತ್ತೇನೆ ಎಂದು ಗ್ರಾ.ಪಂ. ಅಧ್ಯಕ್ಷೆ ತಂಗಮ್ಮ ಗ್ರಾಮಸ್ಥರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆರೋಗ್ಯ ಅಧಿಕಾರಿ ಡಾ. ಸುರೇಶ್, ನೋಡಲ್ ಅಧಿಕಾರಿ ಎಂ.ಕೆ. ದೀನಾ, ಕಂದಾಯ ಪರಿವೀಕ್ಷಕ ನಿಶಾನ್, ಆರೋಗ್ಯ, ಆಶಾ, ಅಂಗನವಾಡಿ ಕಾರ್ಯ ಕರ್ತರು, ಕೋವಿಡ್ ಕೆಲಸಕ್ಕೆ ನಿಯೋಜನೆಗೊಂಡ ಶಿಕ್ಷಕರು ಇವರೆಲ್ಲರ ಸಹಕಾರದಿಂದ ಶಾಸಕರು, ತಹಶೀಲ್ದಾರರ ಸಲಹೆ ಸೂಚನೆಗಳಿಂದ ನಮ್ಮ ಪಂಚಾಯಿತಿ ಕೊರೊನಾ ಮುಕ್ತವಾಗಲು ಸಾಧ್ಯವಾಯಿತು ಎಂದು ಪಿಡಿಓ ರವಿ ಸದ್ದಪ್ಪ ಮೆಟ್ಟಲ ಕೋಡ ‘ಶಕ್ತಿ'ಯೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಲಸಿಕೆ ಅಭಿಯಾನದಲ್ಲೂ ಮುಂದು
೪೨೨೨ ಜನಸಂಖ್ಯೆಯನ್ನು ಹೊಂದಿರುವ ಬಿರುನಾಣಿ ಪಂಚಾಯಿತಿಯಲ್ಲಿ ೪೫ ವರ್ಷ ಮೇಲ್ಪಟ್ಟ ೨೬೦೦ಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ.
- ಚನ್ನನಾಯಕ