ಮಡಿಕೇರಿ, ಜೂ. ೮: ಕೊಡಗು ಜಿಲ್ಲೆಯ ಜನತೆಯ ಅಗತ್ಯತೆಯ ಸಂಪರ್ಕ ವ್ಯವಸ್ಥೆ ಯಾಗಿರುವ ಬಿಎಸ್ ಎನ್ಎಲ್ನ ಸೇವೆ ನೇಪಥ್ಯಕ್ಕೆ ಸರಿಯುತ್ತಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಾ. ೭ರ ‘ಶಕ್ತಿ’ಯಲ್ಲಿ ಪ್ರಕಟಗೊಂಡಿದ್ದ ವಿವರ ವರದಿಯನ್ನು ಆಧರಿಸಿ ಪ್ರತಿಕ್ರಿಯೆ ನೀಡಿರುವ ಅವರು, ಕೊಡಗಿನ ಗ್ರಾಮೀಣ ಜನರ ಸಂಪರ್ಕ ಸಾಧನವಾಗಿದ್ದ ಬಿಎಸ್ ಎನ್ಎಲ್ ಕಳೆದ ಏಳು ವರ್ಷಗಳಿಂದ ಕೇಂದ್ರ ಸರ್ಕಾರ ತೋರಿದ ನಿರ್ಲಕ್ಷö್ಯದಿಂದ ತನ್ನ ಗತಕಾಲದ ವೈಭವವನ್ನು ಕಳೆದುಕೊಳ್ಳುತ್ತಿದೆ. ಬಿಎಸ್ಎನ್ಎಲ್ಗೆ ಮರು ಕಾಯಕಲ್ಪ ನೀಡದಿದ್ದರೆ ಗ್ರಾಮಸ್ಥರ ಹಾಗೂ ಗ್ರಾಹಕರ ಸಹಕಾರದಿಂದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಡಿಜಿಟಲ್ ಇಂಡಿಯಾದ ಭ್ರಮೆ ಮೂಡಿಸುತ್ತಿರುವ ಕೇಂದ್ರ ಸರ್ಕಾರ ಜಾಹೀರಾತಿನ ಪರದೆಗಳ ಮೂಲಕ ದೇಶದ ಜನರನ್ನು ಕತ್ತಲೆಯಲ್ಲಿಟ್ಟಿದೆ ಎಂದು ಟೀಕಿಸಿರುವ ಅವರು, ಕೇವಲ ನಗರ ಪ್ರದೇಶಗಳ ಬಂಡವಾಳ ಶಾಹಿಗಳ ಪರವಾಗಿರುವ ಸರ್ಕಾರ ಬೆಟ್ಟ, ಗುಡ್ಡ, ಕುಗ್ರಾಮಗಳಿಂದ ಕೂಡಿರುವ ಕೊಡಗಿನಂತಹ ಜಿಲ್ಲೆಗಳನ್ನು ಕಡೆಗಣಿಸುತ್ತಿದೆ. ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದು ಕೇವಲ ಪ್ರಚಾರದಲ್ಲಷ್ಟೇ ಪ್ರತಿಬಿಂಬಿಸುತ್ತಾ ಜನರ ಹಾದಿ ತಪ್ಪಿಸಲಾಗುತ್ತಿದೆ. ಮಾಹಿತಿ ತಂತ್ರಜ್ಞಾನದ ಬೆಳವಣಿಗೆಗೆ ಅಗತ್ಯವಿರುವ ದೂರ ಸಂಪರ್ಕ ವ್ಯವಸ್ಥೆಯನ್ನೇ
(ಮೊದಲ ಪುಟದಿಂದ) ಸಮರ್ಪಕವಾಗಿ ನೀಡಲಾಗದ ಸರ್ಕಾರ “ಡಿಜಿಟಲ್ ಇಂಡಿಯಾ” ಪರಿಕಲ್ಪನೆಯನ್ನು ಯಶಸ್ಸಿನ ದಿಕ್ಕಿನತ್ತ ಸಾಗಿಸಲು ಹೇಗೆ ಸಾಧ್ಯ, ಗ್ರಾಮೀಣರು ತಾಂತ್ರಿಕವಾಗಿ ಪ್ರಗತಿಯನ್ನು ಸಾಧಿಸದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಎಸ್ಎನ್ಎಲ್ ಜನಸ್ನೇಹಿಯಾಗಿತ್ತು. ಜನಸೇವೆಯ ಗುರಿಯೊಂದಿಗೆ ಮನೆ ಮನೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊAಡಿತ್ತು. ಆದರೆ ಕಳೆದ ೭ ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಮಲತಾಯಿ ಧೋರಣೆ ತೋರಿದ ಪರಿಣಾಮ ಇಂದು ಬಿಎಸ್ಎನ್ಎಲ್ ಮುಳುಗುವ ಹಡಗಾಗಿದೆ. ಕೊಡಗು ಜಿಲ್ಲೆಯಂತಹ ಪ್ರದೇಶಗಳಿಗೆ ಅನಿವಾರ್ಯವಾಗಿದ್ದ ಈ ದೂರ ಸಂಪರ್ಕ ವ್ಯವಸ್ಥೆ ಇಂದು ಸಂಪರ್ಕವೇ ಇಲ್ಲದೆ ಗ್ರಾಮೀಣರು ಪರಿತಪಿಸುವಂತಾಗಿದೆ. ಬೆಟ್ಟ, ಗುಡ್ಡ ಎನ್ನುವ ಕಾರಣಕ್ಕೆ ಖಾಸಗಿ ಸಂಸ್ಥೆಗಳು ಕೂಡ ಬಂಡವಾಳ ಹಾಕಿ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಮುಂದೆ ಬರುತ್ತಿಲ್ಲ. ಕುಗ್ರಾಮಗಳ ನೆರವಿಗೆ ಸರ್ಕಾರದ ಸಂಸ್ಥೆಯಷ್ಟೇ ಬರಬೇಕಾಗಿದೆ, ಆದರೆ ಬಲವಾಗಿದ್ದ ಬಿಎಸ್ಎನ್ಎಲ್ನ್ನು ನಿಸ್ತೇಜಗೊಳಿಸಿರುವ ಕೇಂದ್ರ ಸರ್ಕಾರ ಗ್ರಾಮೀಣ ಜನರು ಮಾತ್ರವಲ್ಲ ಇದನ್ನೇ ನಂಬಿಕೊAಡಿರುವ ಸರ್ಕಾರಿ ಕಚೇರಿ, ಬ್ಯಾಂಕ್, ಖಾಸಗಿ ಸಂಸ್ಥೆಗಳಿಗೆ ಪರ್ಯಾಯ ವ್ಯವಸ್ಥೆ ಏನು ಎನ್ನುವ ಬಗ್ಗೆ ಸ್ಪಷ್ಟಪಡಿಸುತ್ತಿಲ್ಲ. ನಗರ ಪ್ರದೇಶಗಳಿಗೆ ಖಾಸಗಿ ದೂರ ಸಂಪರ್ಕ ನೆರವಾಗಬಹುದು. ಆದರೆ ಗ್ರಾಮೀಣ ಜನರ ನೆರವಿಗೆ ಬರುವವರು ಯಾರು ಎನ್ನುವ ಪ್ರಶ್ನೆ ಕೊಡಗಿನ ಕುಗ್ರಾಮಗಳನ್ನು ಕಾಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಾಕೃತಿಕ ವಿಕೋಪ, ವನ್ಯಜೀವಿಗಳ ದಾಳಿ, ಕೋವಿಡ್ ನಂತಹ ಸೋಂಕು ವ್ಯಾಪಿಸುವ ತುರ್ತು ಪರಿಸ್ಥಿತಿ, ಸರ್ಕಾರಿ ದಾಖಲೆಗಳ ಮಾಹಿತಿ, ಬ್ಯಾಂಕ್ ವ್ಯವಹಾರದ ವಿವರ ಯಾವುದೂ ಲಭಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಪರಸ್ಪರ ದೂರ ಇರುವವರು ತಮ್ಮ ಮಕ್ಕಳೊಂದಿಗೆ, ಪೋಷಕರೊಂದಿಗೆ, ರಕ್ತ ಸಂಬAಧಿಗಳೊAದಿಗೆ ಕನಿಷ್ಟ ಮಾತನಾಡಲು ಕೂಡ ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಗ್ರಾಮೀಣ ಭಾಗದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಸೇನೆಗೆ ಹೋದವರು ಅಪ್ಪ, ಅಮ್ಮನೊಂದಿಗೆ ಮಾತನಾಡಲು ಕೂಡ ದೂರ ಸಂಪರ್ಕ ವ್ಯವಸ್ಥೆ ಇಲ್ಲದಾಗಿದೆ ಎಂದು ಈಗಿನ ವ್ಯವಸ್ಥೆ ಬಗ್ಗೆ ಕಿಡಿಕಾರಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಪ್ರಮುಖ ಗ್ರಾಮಗಳಲ್ಲಿ ಟವರ್ ಮತ್ತು ದೂರ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಿ ಯಶಸ್ಸನ್ನು ಸಾಧಿಸಿತ್ತು. ಆದರೆ ಇಂದು ಎಲ್ಲಾ ವ್ಯವಸ್ಥೆಗಳು ಸ್ಥಗಿತಗೊಂಡಿದ್ದು, ಕಾಡು ತುಂಬಿದ ಕಚೇರಿಗಳಿಗೆ ಬೀಗ ಜಡಿಯಲಾಗಿದೆ. ಕೆಲವು ಗ್ರಾಮಗಳಲ್ಲಿ ವಿದ್ಯುತ್ ಇದ್ದಾಗ ಮಾತ್ರ ಟವರ್ ಕೆಲಸ ಮಾಡುತ್ತದೆ. ವಾರಗಟ್ಟಲೆ ವಿದ್ಯುತ್ ಕೈಕೊಟ್ಟರೆ ದೂರ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಸರ್ಕಾರ ಜನರೇಟರ್ ಗಳಿಗೆ ಡೀಸೆಲ್ ನೀಡದೆ ಇರುವುದರಿಂದ ಈ ದುಸ್ಥಿತಿ ಉದ್ಭವಿಸಿದೆ. ಇಂದಿಗೂ ಕೊಡಗಿನ ಗ್ರಾಮೀಣ ಭಾಗದಲ್ಲಿ ಸ್ಥಿರ ದೂರವಾಣಿ ವ್ಯವಸ್ಥೆಯನ್ನೇ ನಂಬಿಕೊAಡಿರುವ ಸಾವಿರಾರು ಮಂದಿ ಇದ್ದಾರೆ. ಆದರೆ ಈಗ ಯಾವುದೇ ಪ್ರಯೋಜನ ಇಲ್ಲದಾಗಿದ್ದು, ಸಾಧನಗಳೆಲ್ಲವೂ ಮೂಲೆ ಗುಂಪಾಗಿದೆ ಎಂದು ವೀಣಾಅಚ್ಚಯ್ಯ ಆರೋಪಿಸಿದ್ದಾರೆ.
ಬಿಎಸ್ಎನ್ಎಲ್ ನ್ನು ಮುಳುಗಿಸುವ ಯತ್ನದ ಹಿಂದೆ ದುರುದ್ದೇಶ ಅಡಗಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿರುವ ವೀಣಾಅಚ್ಚಯ್ಯ, ಕೊಡಗಿನ ಗ್ರಾಮೀಣ ಪ್ರದೇಶಗಳಿಗೆ ದೂರ ಸಂಪರ್ಕ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸದಿದ್ದಲ್ಲಿ ಗ್ರಾಮಸ್ಥರನ್ನು ಒಗ್ಗೂಡಿಸಿ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.