ಸಿದ್ದಾಪುರ, ಜೂ. ೮: ಹಾಡಹಗಲೇ ಕಾಡಾನೆ ಹಸುವಿನ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಂಡಿರುವ ಘಟನೆ ವಾಲ್ನೂರು - ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ. ತ್ಯಾಗತ್ತೂರು ಗ್ರಾಮ ನಿವಾಸಿಯಾಗಿರುವ ಕೃಷ್ಣಪ್ಪ ಎಂಬವರು ಮನೆಯ ಸಮೀಪದಲ್ಲಿ ಹಸುವನ್ನು ಬೆಳಿಗ್ಗೆ ೮ ಗಂಟೆಯ ಸಮಯಕ್ಕೆ ಕಟ್ಟಲು ಹೋಗಿದ್ದರು. ಈ ಸಂದರ್ಭದಲ್ಲಿ ಕಾಡಾನೆಗಳ ಹಿಂಡಿನಲ್ಲಿದ್ದ ಸಲಗವೊಂದು ಏಕಾಏಕಿ ಕೃಷ್ಣಪ್ಪ ಅವರನ್ನು ಅಟ್ಟಾಡಿಸಿಕೊಂಡು ಬಂದಿದೆ. ಕೃಷ್ಣಪ್ಪ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಕೋಪಗೊಂಡ ಸಲಗವು ಅವರಿಗೆ ಸೇರಿದ ಹಸುವಿನ ಮೇಲೆ ದಾಳಿ ನಡೆಸಿದೆ. ಕಾಡಾನೆಯ ದಾಳಿಯಿಂದ ಬೆದರಿದ ಕೃಷ್ಣಪ್ಪ ಅವರು ಎದ್ದು ಬಿದ್ದು ಓಡಿ ದಾಳಿಯಿಂದ ಕೂದಲೆಳೆಯ ಅಂತರದಿAದ ಪಾರಾಗಿದ್ದಾರೆ.

ಕಾಡಾನೆಯು ಹಸುವಿನ ಮೇಲೆ ದಾಳಿ ನಡೆಸಿದ ಪರಿಣಾಮ ಹಸುವಿನ ಹೊಟ್ಟೆ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದು, ಕರುಳು ಹೊರಕ್ಕೆ ಬಂದಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಹಸು ಕೆಲ ಸಮಯದ ಬಳಿಕ ಸಾವನ್ನಪ್ಪಿದೆ. ಇದಾದ ಬಳಿಕ ಈ ಪುಂಡಾನೆಯು ಅದೇ ಗ್ರಾಮದ ನಿವಾಸಿ ಎಂ.ಎA. ಹಾಲಪ್ಪ ಬೆಳಿಗ್ಗೆ ಹಸು ಕಟ್ಟಲು ಮನೆಯ ಸಮೀಪದ ಗದ್ದೆಗೆ ಹಸುವಿನೊಂದಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಇವರ ಮೇಲೆ ಕೂಡ ದಾಳಿ ನಡೆಸಲು ಯತ್ನಿಸಿ ಅಟ್ಟಾಡಿಸಿಕೊಂಡು ಬಂದಿದೆ. ಅದೃಷ್ಟವಶಾತ್ ಕಾಡಾನೆ ದಾಳಿಯಿಂದ ಈರ್ವರು ಕೃಷಿಕರು ಪಾರಾಗಿದ್ದಾರೆ.

(ಮೊದಲ ಪುಟದಿಂದ) ಒಂಟಿ ಸಲಗವು ದಾಳಿ ನಡೆಸುವ ಸಂದರ್ಭದಲ್ಲಿ ಇದರೊಂದಿಗೆ ಬೇರೆ ಮೂರು ಕಾಡಾನೆಗಳು ಇದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ವಾಲ್ನೂರು - ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದೆ. ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಮುಖಾಂತರ ಸರ್ಕಾರವು ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನೆಲ್ಯಹುದಿಕೇರಿ, ನಲ್ವತ್ತೇಕರೆಯಿಂದ ದುಬಾರೆವರೆಗೆ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಆದರೆ, ತ್ಯಾಗತ್ತೂರು ಗ್ರಾಮದಲ್ಲಿ ಅಳವಡಿಸಿರುವ ರೈಲ್ವೆಬ್ಯಾರಿಕೇಡ್ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಕಾಡಾನೆಗಳು ರೈಲ್ವೆ ಬ್ಯಾರಿಕೇಡ್ ಬೇಲಿಯೊಳಗೆ ನುಗ್ಗಿ ಬರುತ್ತಿವೆ. ಅಲ್ಲದೇ ಗ್ರಾಮಗಳಿಗೆ ನುಸುಳಿ ದಾಂಧಲೆ ನಡೆಸುತ್ತ ಉಪಟಳ ನೀಡುತ್ತಿದೆ. ಇತ್ತೀಚೆಗೆ ವಾಲ್ನೂರು ಗ್ರಾಮದ ಅಮ್ಮಂಗಾಲ ಗ್ರಾಮದಲ್ಲಿ ಕಾರ್ಮಿಕನೋರ್ವನ ಮೇಲೆ ಹಾಡಹಗಲೇ ಒಂಟಿ ಸಲಗವು ದಾಳಿ ನಡೆಸಿ ಬಲಿತೆಗೆದುಕೊಂಡಿತ್ತು. ರೈಲ್ವೆ ಬ್ಯಾರಿಕೇಡ್ ಅಳವಡಿಸಿದ್ದರೂ ಕೂಡ ಕಾಡಾನೆಗಳ ಹಾವಳಿ ಮರುಕಳಿಸುತ್ತಿರುವುದು ಆತಂಕಕಾರಿ ವಿಚಾರವಾಗಿದೆ.

ಪುಂಡಾನೆ ಸೆರೆಗೆ ಗ್ರಾಮಸ್ಥರ ಒತ್ತಾಯ: ವಾಲ್ನೂರು - ತ್ಯಾಗತ್ತೂರು ಗ್ರಾಮದಲ್ಲಿ ಬೀಡುಬಿಟ್ಟಿರುವ ಒಂಟಿಸಲಗವು ಆಗ್ಗಿಂದಾಗೆ ಮಾನವನ ಮೇಲೆ ದಾಳಿ ನಡೆಸುತ್ತಿದೆ. ಅಲ್ಲದೇ ಮಾನವನನ್ನು ಕಂಡ ಕೂಡಲೆ ಅಟ್ಟಿಸಿಕೊಂಡು ಬರುತ್ತಿದ್ದು, ತೀವ್ರವಾಗಿ ಉಪಟಳ ನೀಡುತ್ತಿದೆ. ಹಸುವಿನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಈ ಪುಂಡಾನೆಯನ್ನು ಕೂಡಲೆ ಅರಣ್ಯ ಇಲಾಖಾಧಿಕಾರಿಗಳು ಸೆರೆ ಹಿಡಿದು ಸ್ಥಳಾಂತರ ಮಾಡಬೇಕೆಂದು ತ್ಯಾಗತ್ತೂರು ಗ್ರಾಮದ ನಿವಾಸಿ ಮುಂಡ್ರುಮನೆ ಸುಧೀಶ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ. - ವರದಿ : ವಾಸು, ಅಂಚೆಮನೆ ಸುಧಿ