ಕೊಡ್ಲಿಪೇಟೆ,ಜೂ.೭: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರದಲ್ಲಿರುವ ಹೇಮಾವತಿ ನದಿಗೆ ಹಾರಿ ವಾಟರ್ ಮೆನ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ. ಕೊಡ್ಲಿಪೇಟೆ ಗ್ರಾ.ಪಂ.ನಲ್ಲಿ ವಾಟರ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ಮಣಿ ಮುತ್ತು (೩೪) ಎಂಬವರೇ ಆತ್ಮಹತ್ಯೆಗೆ ಶರಣಾಗಿದ್ದು, ತನ್ನ ಪತ್ನಿಯ ಎದುರೇ ನದಿಗೆ ಹಾರಿದ್ದಾರೆ.

ಇಂದು ಮಧ್ಯಾಹ್ನದ ವೇಳೆಯಲ್ಲಿ ಪತ್ನಿಯೊಂದಿಗೆ ಶಿವಪುರದ ಬಳಿಯಿರುವ ಪಂಪ್ ಹೌಸ್ ಬಳಿಗೆ ಆಗಮಿಸಿದ ಮಣಿಮುತ್ತು, ಪತ್ನಿಯೊಂದಿಗೆ ಜಗಳವಾಡಿ ನದಿಗೆ ಹಾರಿದ್ದಾನೆ ಎನ್ನಲಾಗಿದೆ.

ಪತಿ ಪತ್ನಿಯ ನಡುವೆ ಆಗಾಗ್ಗೆ ಕೌಟುಂಬಿಕ ಕಲಹ ನಡೆಯುತ್ತಿದ್ದು, ಇಂದು ಪತ್ನಿಯನ್ನು ನದಿಗೆ ತಳ್ಳುವುದಾಗಿ ಮನೆಯಲ್ಲಿ ಹೇಳಿ ಪತ್ನಿ ಸಹಿತ ನದಿಯ ಬಳಿ ತೆರಳಿದ್ದ ಎಂದು ಸಂಬAಧಿಕರು ತಿಳಿಸಿದ್ದಾರೆ.

ತನ್ನ ಪತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ನಿ ಸರಸ್ವತಿ, ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಶನಿವಾರಸಂತೆ ಪೊಲೀಸ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ, ಠಾಣಾಧಿಕಾರಿ ದೇವರಾಜ್, ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾರೆ. ನಂತರ ಸೋಮವಾರಪೇಟೆ ಅಗ್ನಿಶಾಮಕ ಠಾಣೆಗೆ ಮಾಹಿತಿ ರವಾನಿಸಿದ ಮೇರೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.ಇವರೊಂದಿಗೆ ಗರಗಂದೂರಿನ ಮುಳುಗು ತಜ್ಞರು ಆಗಮಿಸಿ ಮೃತದೇಹದ ಶೋಧ ಕಾರ್ಯ ನಡೆಸುತ್ತಿದ್ದಾರೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಸಂಜೆಯವರೆಗೂ ಮೃತದೇಹ ಪತ್ತೆಯಾಗಿಲ್ಲ. ನದಿಯಲ್ಲಿ ಕಣ್ಮರೆಯಾಗಿರುವ ಮಣಿ ಮುತ್ತು ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.