ಲಸಿಕೆ ನಿರಾಕರಿಸಿದ ಹಾಡಿ ಜನರನ್ನು ಭೇಟಿ ಮಾಡಿದ ಶಾಸಕ ಕೆ.ಜಿ.ಬಿ

ಗೋಣಿಕೊಪ್ಪಲು.ಜೂ.೫: ಕೋವಿಡ್ ಲಸಿಕೆ ಪಡೆಯಲು ನಿರಾಕರಿಸಿದ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ಸಮೀಪದ ಹಾಡಿಗೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿದರು. ಲಸಿಕೆ ಪಡೆದುಕೊಳ್ಳುವಂತೆ ಮನವೊಲಿಸಿದರು. ಗಿರಿಜನರು ಮಾತ್ರ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಶಾಸಕರಿಗೆ ತಿಳಿಸಿದರು. ನಂತರ ಗಿರಿಜನರು ಮೊದಲು ನಗರ ಪ್ರದೇಶದವರಿಗೆ ಲಸಿಕೆ ನೀಡಿ, ಬೇಕಾದಲ್ಲಿ ೨ ತಿಂಗಳ ಬಳಿಕ ನಾವು ಪಡೆದುಕೊಳ್ಳುತ್ತೇವೆ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಅಭಿಪ್ರಾಯ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು, ರೆವಿನ್ಯೂ ಅಧಿಕಾರಿಗಳು ಹಾಡಿಯ ಜನರ ಬಳಿ ತೆರಳಿ ಸರ್ಕಾರದ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿದ್ದರು. ಈ ವೇಳೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ವಿಷಯದಲ್ಲಿ ಅಲ್ಲಿನ ನಿವಾಸಿಗಳು ನಿರಾಕರಿಸಿ, ಹಾಡಿಗೆ ಪ್ರವೇಶ ಮಾಡದಂತೆ ವಾಪಾಸು ಕಳುಹಿಸಿದ್ದರು.

ಈ ಬಗ್ಗೆ ‘ಶಕ್ತಿ’ ಸಮಗ್ರ ವರದಿ ಪ್ರಕಟಿಸಿ ಬೆಳಕು ಚೆಲ್ಲಿತ್ತು. ವರದಿಯ ಹಿನ್ನೆಲೆಯಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ, ತಹಶೀಲ್ದಾರ್ ಯೋಗಾನಂದ್, ಐಟಿಡಿಪಿ ಜಿಲ್ಲಾ ಉಪನಿರ್ದೇಶಕ ಶಿವಕುಮಾರ್, ತಾಲೂಕು ಅಧಿಕಾರಿ ಗುರುಶಾಂತಪ್ಪ ಹಾಡಿಗೆ ಭೇಟಿ ನೀಡಿ ಕೋವಿಡ್ ನಿಯಮ ಪಾಲನೆ ಮಾಡುವಂತೆ ಮನವೊಲಿಸುವ ಪ್ರಯತ್ನ ನಡೆಸಿದರು. ಶಾಸಕರ ಮಾತನ್ನು ಆಲಿಸಿದ ಹಾಡಿಯ ಮುಖಂಡರು ಆರಂಭದಲ್ಲೇ ಲಸಿಕೆ ಹಾಕಿಸಿಕೊಳ್ಳುವ ವಿಚಾರದಲ್ಲಿ ಹಿಂದೇಟು ಹಾಕಿದರು.

ತಹಶೀಲ್ದಾರ್, ಐಟಿಡಿಪಿ ಅಧಿಕಾರಿಗಳು, ಗ್ರಾ.ಪಂ ಪಿ.ಡಿ.ಓ, ಆರೋಗ್ಯ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆರು, ಆರೋಗ್ಯ ಸಹಾಯಕರು ಸೇರಿದಂತೆ ಅನೇಕ ಅಧಿಕಾರಿಗಳು ಶಾಸಕರೊಂದಿಗೆ ಸ್ಥಳಕ್ಕೆ ತೆರಳಿದರು. ಎಷ್ಟೇ ಮನವೊಲಿಸಿದರು ಗಿರಿಜನರು ಅಧಿಕಾರಿಗಳ ಮಾತಿಗೆ ಮನ್ನಣೆ ನೀಡಲಿಲ್ಲ.

ನಾವುಗಳು ಇಲ್ಲಿನ ಪರಿಸರಕ್ಕೆ ಹೊಂದಿಕೊAಡಿದ್ದೇವೆ. ಇಲ್ಲಿರುವ ಗಿಡ, ಬಳ್ಳಿ, ಎಲೆಗಳಿಂದ ಕಾಯಿಲೆ ಯನ್ನು ಗುಣಪಡಿಸಿಕೊಳ್ಳುತ್ತೇವೆ. ನಮಗಂತು ಯಾವುದೇ ಲಸಿಕೆ ಬೇಡ, ನಗರ ಪ್ರದೇಶದಲ್ಲಿರುವ ಜನರಿಗೆ ಲಸಿಕೆ ಕೊಡಿ, ಮುಂದೆ ನಾವುಗಳು ಲಸಿಕೆ ಹಾಕಿಸಿಕೊಳ್ಳುವ ಸಂದರ್ಭ ಬಂದಾಗ ನಿಮಗೆ ತಿಳಿಸುತ್ತೇವೆ ಆಗ ಲಸಿಕೆ ನೀಡಿ ಎಂದು ಔಷಧೀಯ ಗುಣಗಳಿರುವ ಎಲೆ, ಬಳ್ಳಿಗಳನ್ನು ತಂದು ಶಾಸಕರಿಗೆ, ಅಧಿಕಾರಿಗಳಿಗೆ ತೋರಿಸಿ, ಇದರಿಂದಲೇ ನಮ್ಮ ಕಾಯಿಲೆಗಳು ಗುಣವಾಗುತ್ತವೆ ಎಂದು ಸಮಜಾಯಿಷಿಕೆ ನೀಡಿದರು.

ಸರ್ಕಾರ ಗಿರಿಜನರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ತಾವುಗಳು ಇಲಾಖೆಯೊಂದಿಗೆ ಸಹಕರಿಸಬೇಕು, ಹಕ್ಕುಪತ್ರ, ಮನೆ ನಿರ್ಮಾಣ, ಶೌಚಾಲಯ ಸೇರಿದಂತೆ ಇನ್ನಿತರ ಪ್ರಮುಖ ಕೆಲಸಗಳನ್ನು ಇಲಾಖೆ ಮಾಡಲಿದೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಲಾಕ್‌ಡೌನ್ ಮುಗಿದ ನಂತರ ಈ ಬಗ್ಗೆ ಕೆಲಸಗಳನ್ನು ಕೈಗೆತ್ತಿಕೊಳ್ಳುವುದಾಗಿ ಶಾಸಕ ಕೆ.ಜಿ. ಬೋಪಯ್ಯ ಗಿರಿಜನರಿಗೆ ಭರವಸೆ ನೀಡಿದರು.

ಗಿರಿಜನ ಕಲ್ಯಾಣ ಇಲಾಖೆಯ ವತಿಯಿಂದ ಆಹಾರ ಕಿಟ್‌ಗಳನ್ನು ಶಾಸಕರು ವಿತರಿಸಿದರು. ಆದರೆ ಹಾಡಿಯಲ್ಲಿ ಅಳವಡಿಸಿದ್ದ ನಾಮಫಲಕ ಮಾತ್ರ ತೆಗೆಯಲಿಲ್ಲ. ನಾಮಫಲಕ ಇರುವುದರಿಂದ ಯಾರು ಕೂಡ ಹಾಡಿ ಪ್ರವೇಶ ಮಾಡುವುದಿಲ್ಲ. ಆಗಾಗಿ ನಾಮಫಲಕ ಅಳವಡಿಸಿದ್ದೇವೆ ಎಂದು ಸಮಜಾಯಿಷಿಕೆಯನ್ನು ಹಾಡಿಯ ಮುಖಂಡರು ನೀಡಿದರು.

ಈ ಸಂದರ್ಭ ತಹಶೀಲ್ದಾರ್ ಯೋಗಾನಂದ್, ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ವೈದ್ಯಾಧಿಕಾರಿ ಡಾ. ಯತಿರಾಜ್, ಡಿವೈಎಸ್‌ಪಿ ಜಯಕುಮಾರ್, ವೃತ್ತ ನಿರೀಕ್ಷಕ ಜಯರಾಂ, ಮಾಜಿ ಜಿ.ಪಂ ಸದಸ್ಯ ಸಿ.ಕೆ. ಬೋಪಣ್ಣ, ಪಿಡಿಒ ಕಳ್ಳಿಚಂಡ ಪೂಣಚ್ಚ, ಕಂದಾಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.

- ಹೆಚ್.ಕೆ.ಜಗದೀಶ್