ಮಡಿಕೇರಿ, ಜೂ. ೫: ನಗರದ ಐತಿಹಾಸಿಕ ಗದ್ದುಗೆ ಜಾಗ ಒತ್ತುವರಿ ಆರೋಪ ಹಿನ್ನೆಲೆ ಹೈಕೋರ್ಟ್ ಆದೇಶದಂತೆ ಕಂದಾಯ ಇಲಾಖೆ, ಸರ್ವೆ ಇಲಾಖೆ, ನಗರಸಭೆ ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಸರ್ವೆ ಕಾರ್ಯ ನಡೆಯಿತು.
ನಿವೃತ್ತ ಐ.ಎ.ಎಸ್ ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ ಅವರು ವಕೀಲ ರವೀಂದ್ರನಾಥ್ ಕಾಮತ್ ಅವರ ಮೂಲಕ ಸಲ್ಲಿಸಿದ್ದ ರಿಟ್ ಅರ್ಜಿ ಅನ್ವಯ ನ್ಯಾಯಾಲಯದ ಆದೇಶದಂತೆ ಒತ್ತುವರಿಯಾಗಿದೆ ಎನ್ನಲಾದ ಸರ್ವೆ ನಂಬರ್ ೩೦/೧ ರ ೧೯ ಎಕರೆ ೮೦ ಸೆಂಟ್ ಪ್ರದೇಶದ ಗಡಿ ಗುರುತು ಕಾರ್ಯ ಮೊದಲು ನಡೆಯಿತು. ಎ.ಡಿ.ಎಲ್.ಆರ್.ನ ಇಬ್ಬರು ಸರ್ವೆಯರ್ಗಳು ಕ್ರಮಬದ್ಧವಾಗಿ ಸರ್ವೆ ನಡೆಸಿದರು.
ಸರ್ವೆ ನಡೆಸಿ ಗಡಿ ಗುರುತು ಮಾಡುವ ಹಿನ್ನೆಲೆ ಅಲ್ಲಿನ ನಿವಾಸಿಗಳು, ಕೆಲ ಇಲಾಖೆಯ ಅಧಿಕಾರಿಗಳು ಸೇರಿದಂತೆ ೩೧ ಮಂದಿಗೆ ನೋಟೀಸ್ ನೀಡಲಾಗಿತ್ತು. ಮೊದಲು ಗಡಿ ಗುರುತಿಸಿ, ವಾಸ್ತವಾಂಶ ವರದಿಯನ್ನು ತಾ. ೧೬ ರಂದು ನಡೆಯುವ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಮಡಿಕೇರಿ ತಹಶೀಲ್ದಾರ್ ಮಹೇಶ್ ತಿಳಿಸಿದರು.
ವೀರಶೈವ ಸಮಾಜದ ಜಿಲ್ಲಾ ಕಾರ್ಯದರ್ಶಿ ಸಾಂಬಶಿವ ಮಾತನಾಡಿ, ಸ್ಮಾರಕ ಜಾಗ ಸಂರಕ್ಷಿಸುವ ನಿಟ್ಟಿನಲ್ಲಿ ಸರ್ವೆಯ ಅವಶ್ಯಕತೆ ಇದೆ. ಹೀಗಾಗಿ ವಿರೂಪಾಕ್ಷಯ್ಯ ಅವರು ರಿಟ್
(ಮೊದಲ ಪುಟದಿಂದ) ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಿದೆ. ಅದರಂತೆ ಸರ್ವೆ ನಡೆದಿದೆ. ವೀರಶೈವ ಸಮಾಜ ಈ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಿತ್ತು. ಈ ಹಿಂದೆ ಗಡಿ ಗುರುತಿಸಿ ಸರ್ವೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಅದರಂತೆ ಈ ಬಾರಿ ಸರ್ವೆ ನಡೆದಿದೆ ಎಂದು ತಿಳಿಸಿದರು.
ವಿವಾದಿತ ಜಾಗವು ಪ್ರಾಚ್ಯವಸ್ತು ಇಲಾಖೆಗೆ ಸೇರಿದ್ದು, ಒತ್ತುವರಿ ತೆರವುಗೊಳಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಗದ್ದುಗೆ ಪ್ರದೇಶವನ್ನು ಕೇಂದ್ರ ಪ್ರಾಚ್ಯವಸ್ತು ಇಲಾಖಾ ವಶಕ್ಕೆ ಒಪ್ಪಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಸರ್ವೆ ಸಂದರ್ಭ ನಗರಸಭೆ ಸದಸ್ಯರಾದ ಮನ್ಸೂರ್ ಅಲಿ, ಅಮೀನ್ ಮೊಹ್ಸಿನ್, ಪೌರಾಯುಕ್ತ ರಾಮದಾಸ್, ವೀರಶೈವ ಸಮಾಜದ ಮಡಿಕೇರಿ ತಾಲೂಕು ಅಧ್ಯಕ್ಷ ರುದ್ರಪ್ರಸನ್ನ, ಕಾರ್ಯದರ್ಶಿ ಜಗದೀಶ್ ಪ್ರಶಾಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು. ನಗರ ಠಾಣಾಧಿಕಾರಿ ಅಂತಿಮ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಭದ್ರತೆ ವಹಿಸಲಾಗಿತ್ತು.