ಜೂನ್ ೭ ವಿಶ್ವ ಆಹಾರ ಸುರಕ್ಷತಾ ದಿನ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಎಫ್ಎಓ ಸಹಯೋಗದಲ್ಲಿ ಆಹಾರದಿಂದ ಉಂಟಾಗುವ ಅಪಾಯಗಳನ್ನು ಪತ್ತೆ ಹಚ್ಚಿ, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕಾರ್ಯಗತಗೊಳಿಸುವ ಉದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು.
‘ಅನ್ನದೇವರ ಮುಂದೆ ಇನ್ನು ದೇವರು ಉಂಟೆ?’
ಎAಬ ನುಡಿಮುತ್ತು ಜೀವ ಸಂಕುಲಕ್ಕೆ ಆಹಾರದ ಪ್ರಾಮುಖ್ಯತೆಯನ್ನು ಒತ್ತಿ ಹೇಳುವಂತಿದೆ. ಮಾನವನ ಆರೋಗ್ಯ, ಆಯುಷ್ಯದ ಗುಟ್ಟು ಅವನು ರೂಢಿಸಿಕೊಂಡಿರುವ ಆಹಾರಪದ್ಧತಿ ಹಾಗೂ ಜೀವನ ಶೈಲಿಯಿಂದ ನಿರ್ಣಯವಾಗುತ್ತದೆ. ನಮ್ಮ ಹಿರಿಯ ತಲೆಮಾರಿನವರ ಆಯುಷ್ಯ ಹಾಗೂ ಆರೋಗ್ಯದ ಬಗ್ಗೆ ಒಮ್ಮೆ ಹಿನ್ನೋಟ ಹರಿಸಿದರೆ ಸಾಕು, ಸಾಕಷ್ಟು ವಿಚಾರಗಳು ಲಭಿಸುವುವು.
ನಮ್ಮ ಪೂರ್ವಜರು ಶತಾಯುಷಿಗಳಾಗಿ ಬಾಳಿದವರೇ ಎಲ್ಲರೂ. ಈಗಿನ ಸರಾಸರಿ ಆಯುಷ್ಯ ಹೆಚ್ಚೆಂದರೆ ೬೦-೭೦ರ ನಡುವೆ. ನಮ್ಮ ಅರ್ಧ ಆಯುಸ್ಸಿಗೆ ತಲುಪುವಷ್ಟರಲ್ಲಿ ಈಗ ನಮ್ಮ ದೇಹ ಹಲವು ಕಾಯಿಲೆಗಳ ಗೂಡಾಗಿರುತ್ತದೆ. ಇದಕ್ಕೆ ಕಾರಣಗಳು ಹಲವು. ಕೆಲವು ಸ್ವಯಂಕೃತ ಅಪರಾಧಗಳಾದರೆ, ಕೆಲವು ನಮ್ಮ ಅರಿವಿಗೆ ಬಾರದೆ ಆಗುತ್ತಿರುವ ಮೋಸವೆಂದೇ ಹೇಳಬೇಕು. ದೇಹದ ಆರೋಗ್ಯದ ದೃಷ್ಟಿಯಿಂದ ಸಾತ್ವಿಕ ಆಹಾರ ಪದ್ಧತಿ ಹೆಚ್ಚಿನವರಿಗೆ ಹಿಡಿಸುವುದಿಲ್ಲ. ಬಾಯಿರುಚಿಗಾಗಿ ಕೃತಕ ಬಣ್ಣ ಮತ್ತು ರುಚಿಗೆ ಕಟ್ಟುಬಿದ್ದು ಹೊಟೇಲ್, ರೆಸ್ಟೋರೆಂಟ್, ಬೀದಿ ಬದಿಯ ಆಹಾರಕ್ಕೆ ಶರಣಾದವರು ತಮ್ಮ ದೇಹದ ಆರೋಗ್ಯವನ್ನು ಕೈಯಾರೆ ಹಾಳುಗೆಡವುತ್ತಾರೆ. ನಿಜಕ್ಕೂ ಆಹಾರ ಪದ್ಧತಿಯ ಅರಿವಿರುವ ಮಂದಿ ಮಾರುಕಟ್ಟೆಯಿಂದ ಸಿಗುವ ತಾಜಾ ತರಕಾರಿ, ಹಾಲು ಹಣ್ಣು-ಹಂಪಲುಗಳನ್ನೇ ಬಳಸುವವರು. ಆದರೆ ಅರಿವಿಗೂ ಬಾರದೆ ಪರೋಕ್ಷವಾಗಿ ವಿಷವುಣ್ಣುತ್ತಿದ್ದೇವೆ ಎಂದು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗಲೇ ನಮಗೆ ತಿಳಿಯುವುದು. ನಿಜಕ್ಕೂ ಇದರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ನಮ್ಮ ಮುಂದಿದೆ.
ಭಾರತೀಯ ಕೃಷಿ ಪರಂಪರೆ ಎಂದರೆ ಪ್ರಕೃತಿಗೆ ಪೂರಕವಾದ ಬೆಳೆಗಳನ್ನೇ ಬೆಳೆಯುವುದು ಹಾಗೂ ಬೆಳೆದವರೇ ಅದರ ಫಲಾನುಭವಿಗಳೂ ಕೂಡ. ಅವರ ಬೆಳೆಯೇ ಅವರಿಗೆ ಆಹಾರ. ಇಲ್ಲಿ ಮೂರನೆಯವರಿಗೆ ಪ್ರವೇಶ ಇರಲಾರದು. ಆವಶ್ಯಕತೆಗೆ ಅನುಸಾರವಾಗಿ ಅನುಭೋಗ. ಒಂದು ವೇಳೆ ಅವಕಾಶಗಳು ಇದ್ದರೂ ಅದು ವಸ್ತು ವಿನಿಮಯ ಪದ್ಧತಿಯ ಮೂಲಕ ಆಹಾರ ಹಂಚಿಕೆಯಾಗುತ್ತಿತ್ತು. ಇಲ್ಲಿ ಮೋಸ, ವ್ಯಾವಹಾರಿಕ ದೃಷ್ಟಿ ಇರದೇ ಪ್ರೀತಿ ಬಾಂಧವ್ಯದ ಕುರುಹು ಇರುತ್ತಿತ್ತು. ಆದರೆ ಯಾವಾಗ ಈ ಜಾಗತೀಕರಣದಿಂದಾಗಿ ಅಭಿವೃದ್ಧಿಯ ದೃಷ್ಟಿಯಿಂದ ಮುಕ್ತ ವ್ಯಾಪಾರ ನೀತಿಗೆ ಭಾರತವೂ ತನ್ನನ್ನು ತಾನು ತೆರೆದಿಟ್ಟುಕೊಂಡಿತೋ ಬೆಳೆಯುತ್ತಿದ್ದ ಬೆಳೆ ಆಹಾರಕ್ಕಷ್ಟೇ ಸೀಮಿತವಾಗದೆ ವ್ಯಾಪಾರ, ಲಾಭದ ದೃಷ್ಟಿಕೋನವನ್ನು ಬೆಳೆಸಿಕೊಂಡದ್ದು ಬಹುದೊಡ್ಡ ದುರಂತ. ಇದಕ್ಕಾಗಿ ಬಳಸದ ವಾಮಮಾರ್ಗಗಳಿಲ್ಲ! ಪ್ರಕೃತಿ ನಿಯಮಕ್ಕೆ ವಿರೋಧವಾಗಿ ಸಹಜವಾಗಿ ಬೆಳೆಯುವ ಪರಿಯೇ ಬದಲಾಯಿತು. ರಾಸಾಯನಿಕಗಳನ್ನು ಬಳಸಿ ತೆಗೆದ ಬೆಳೆ, ಅದರ ಸಂಗ್ರಹಣೆಯಲ್ಲಿಯೂ ರಾಸಾಯನಿಕಗಳ ಬಳಕೆ ಹೆಚ್ಚಿತು. ಇನ್ನು ಇದನ್ನು ಉಪಯೋಗಿಸಿದ ಗ್ರಾಹಕರ ಆರೋಗ್ಯದ ಪಾಡೇನು?
ಮನುಷ್ಯನ ಆರೋಗ್ಯದ ಆಧಾರ ಸ್ಥಂಭವೇ ಆಹಾರ. ಇದು ದೇಹಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುವ ಬದಲು ಅಮೃತವಾಗಬೇಕಾದ್ದು ವಿಷವಾದರೆ ಆರೋಗ್ಯದ ಗತಿ? ಬೇಲಿಯೇ ಎದ್ದು ಹೊಲ ಮೇದಂತೆಯೇ. ಅವರವರ ದೇಹ ಪ್ರಕೃತಿಗನುಗುಣವಾಗಿ ರೂಢಿಸಿಕೊಂಡ ಆಹಾರ ಪದ್ಧತಿ ಸಂಪೂರ್ಣವಾಗಿ ಫಲಪ್ರದವಾಗುತ್ತಿದೆಯೇ? ಖಂಡಿತವಾಗಿಯೂ ಇಲ್ಲ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸುವ ಮಂದಿಯೂ ಇದರ ಸಮಸ್ಯೆಗೆ ತುತ್ತಾಗುವರು ಎಂದರೆ ಸಮಸ್ಯೆಯ ಮೂಲ ಹುಡುಕಬೇಕಾಗುತ್ತದೆ. ಹೊರಗಿನ ಬ್ಯಾಕ್ಟೀರಿಯಾ, ವೈರಸ್ಗಳಿಂದ ಬರುವ ಕೋವಿಡ್ನಂತಹ ಕಾಯಿಲೆಗಳು ಮನುಷ್ಯನ ತುರ್ತು ಸಾವಿಗೇನೋ ಕಾರಣವಾಗಬಹುದು. ಆದರೆ ಉತ್ತಮ ಆರೋಗ್ಯ ಭಾಗ್ಯಕ್ಕಾಗಿ ಸ್ವೀಕರಿಸುವ ಆಹಾರವೇ ನಮ್ಮ ನಿಧಾನಗತಿಯ ಸಾವಿಗೆ ಮೂಲವಾಗುತ್ತಿದೆ.
ಮಕ್ಕಳ ಬಾಲ್ಯ ಹಿಂದೆ ೧೨ ವರ್ಷದವರೆಗೆ. ಈಗ ಏಳೆಂಟು ವರ್ಷಕ್ಕೇ ಮಕ್ಕಳು ಪ್ರೌಢಾವಸ್ಥೆಗೆ ಬರುತ್ತಿರುವುದು ನಮ್ಮ ಆಹಾರ ಕ್ರಮದಿಂದಾಗಿ ಎನ್ನಲಾಗುತ್ತಿದೆ. ವೈದ್ಯಲೋಕಕ್ಕೆ ಸವಾಲಾಗುವಂತಹ ಲಿಂಗ ಪರಿವರ್ತನೆಗಳಂತಹ ಪ್ರಮಾದಗಳಿಗೂ ಕಾರಣವಾಗುತ್ತಿದೆ ಇಂದಿನ ಆಹಾರಕ್ರಮ.
ಇದರ ಸಾಧಕ-ಬಾಧಕಗಳನ್ನು ನೋಡುತ್ತ ಹೋದರೆ ಪರಿಹಾರ ಅಡಗಿರುವುದು ಸಮಸ್ಯೆಯ ಮೂಲಕ್ಕೆ ಹೋದಾಗ. ರೈತ ಬೆಳೆಯುವ ಬೆಳೆಯಿಂದ ಪ್ರಾರಂಭವಾಗಿ ಅದು ಗ್ರಾಹಕನ ಕೈಸೇರುವವರೆಗೂ ಎಲ್ಲ ಚಟುವಟಿಕೆಗಳೂ ಪರಿಶುದ್ಧವಾಗಿ, ಪಾರದರ್ಶಕತ್ವದಿಂದ ಸಾಗಬೇಕು. ಆಹಾರದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಪ್ರಯತ್ನಕ್ಕೆ ಸರ್ಕಾರ, ಉತ್ಪಾದಕರು ಮಾರಾಟಗಾರರು, ಗ್ರಾಹಕರ ನಡುವೆ ಏಕಾಭಿಪ್ರಾಯದಡಿ ಯೋಜನೆಗಳು ಕಾರ್ಯಗತವಾಗಬೇಕು. ವ್ಯಾವಹಾರಿಕ ಮನೋಭಾವವನ್ನು ಕಿತ್ತೆಸೆದು ಆರೋಗ್ಯವೇ ಭಾಗ್ಯ ಎಂಬ ಧ್ಯೇಯ ವಾಕ್ಯದಡಿ ತಮ್ಮನ್ನು ಭಾಗೀದಾರರನ್ನಾಗಿಸಿಕೊಂಡಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ. ನಮ್ಮ ಆಹಾರ ಕ್ರಮದಿಂದಾಗಿ ದೇಹವನ್ನು ಸದೃಢಗೊಳಿಸಿದ್ದೇ ಆದಲ್ಲಿ ಯುದ್ಧಕ್ಕೆ ಸಜ್ಜಾದ ಸೈನಿಕರ ಸ್ಥಾನ ದೇಹದ ರೋಗ ನಿರೋಧಕ ಶಕ್ತಿಯದ್ದು. ಆಗ ಕೊರೊನಾವೇ ಬರಲಿ, ಮತ್ತೊಂದೇ ಬರಲಿ ನಮ್ಮನ್ನೇನೂ ಮಾಡಲಾರದು.
- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು,
ಸಂತ ಅನ್ನಮ್ಮ ಪದವಿ ಕಾಲೇಜು, ವೀರಾಜಪೇಟೆ.