ಮಡಿಕೇರಿ, ಜೂ. ೫: ಲಸಿಕೆ ನೀಡಲು ಆದ್ಯತಾ ಗುಂಪುಗಳನ್ನು ಆಯ್ಕೆ ಮಾಡಿರುವಂತೆ ಜಿಲ್ಲೆಯ ವರ್ತಕ ಸಮುದಾಯಕ್ಕೂ ಲಸಿಕೆ ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿರುವುದಾಗಿ ಕೊಡಗು ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ತಿಳಿಸಿದೆ.
ವರ್ತಕರನ್ನು ಲಸಿಕೆಯ ಆದ್ಯತಾ ಗುಂಪಿಗೆ ಸೇರಿಸಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಎಂ.ಬಿ. ದೇವಯ್ಯ, ಪ್ರಧಾನ ಕಾರ್ಯದರ್ಶಿ ನವೀನ್ ಅಂಬೆಕಲ್ಲು ಹಾಗೂ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಅಲ್ಲದೆ ಲಾಕ್ಡೌನ್ ಸಂದರ್ಭ ವಾರದ ಮೂರು ದಿನಗಳು ವ್ಯಾಪಾರಕ್ಕೆ ನಿಗದಿಪಡಿಸಿರುವ ೬ ರಿಂದ ೧೦ ಅವಧಿಯನ್ನು ವಿಸ್ತರಿಸುವ ಬಗ್ಗೆ ತುರ್ತು ಗಮನ ಹರಿಸುವುದಾಗಿ ಒಪ್ಪಿದ್ದಾರೆ. ಅಗತ್ಯ ಸಭೆಗಳಿಗೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅನ್ನು ಆಹ್ವಾನಿಸುವ ಬಗ್ಗೆಯೂ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ನವೀನ್ ಅಂಬೇಕಲ್ಲು ತಿಳಿಸಿದ್ದಾರೆ.